ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತ.ನಾಡಿಗೆ ನೀರು ಬಿಡಬಾರದು: ಕಾಂಗ್ರೆಸ್ ಶಾಸಕನ ಎಚ್ಚರಿಕೆ

Ravikumar Ganiga
Published on

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡಬಾರದು. ಒಂದು ವೇಳೆ ಬಿಟ್ಟರೆ ಜನರ ಜತೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರಾಜ್ಯಸರ್ಕಾರಕ್ಕೆ ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದರು.

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಲ್ಲೇ ನೀರು ಇಲ್ಲದಿದ್ದರೂ ತ.ನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆದೇಶಿಸಿರುವುದು ಸರಿಯಲ್ಲ. ತೀರ್ಪು ನೀಡುವ ಮೊದಲು ಇಲ್ಲಿನ ವಾಸ್ತವತೆ ಅರಿಯಬೇಕು. ಆದರೆ, ಪ್ರಾಧಿಕಾರದಲ್ಲಿರುವವರು ಯಾವ ಮಾನದಂಡದ ಮೇಲೆ ತೀರ್ಪು ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 101 ಅಡಿಗೆ ಕುಸಿದಿದ್ದು, ಇದರಿಂದ ರೈತರು, ಜನ ಜಾನುವಾರುಗಳಿಗೆ ನೀರಿಲ್ಲವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಾಧಿಕಾರದ ಒತ್ತಾಯಕ್ಕೆ ಮಣಿಯಬಾರದು. ತ.ನಾಡಿನ ಮೆಟ್ಟೂರು ಡ್ಯಾಂನಲ್ಲೇ ಹೆಚ್ಚು ನೀರಿದೆ. ನಮ್ಮ ನಾಲ್ಕು ಡ್ಯಾಂಗಳಲ್ಲಿ ನೀರಿಲ್ಲದ ಕಾರಣ ದೀರ್ಘಾವಧಿ ಬೆಳೆಗಳನ್ನು ಹಾಕಬೇಡಿ ಎಂದು ರೈತರಿಗೆ ತಿಳಿಸಿದ್ದೇವೆ. ಅದೇ ರೀತಿ ತ.ನಾಡಿನವರೂ ಅಲ್ಲಿಯ ರೈತರಿಗೆ ತಿಳಿಸಲಿ. ಅದು ಬಿಟ್ಟು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮಡಿಕೇರಿಯಿಂದ ಹರಿದು ಬರುವ ನೀರಿಗೆ ಅಡ್ಡಲಾಗಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಲಾಗಿದೆ ಎಂದು ಹೇಳುವ ತ.ನಾಡು, ಅದೇ ರೀತಿ ನಮ್ಮ ಜಿಲ್ಲೆಯಿಂದ ಹರಿದು ಹೋಗುವ ನೀರಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟಲು ವಿರೋಧಿಸದೆ ಸಹಕರಿಸಬೇಕು. ಇನ್ನು ಕಾವೇರಿ ನೀರನ್ನು ಹೆಚ್ಚು ಕುಡಿಯಲು ಉಪಯೋಗಿಸುವ ಬೆಂಗಳೂರಿಗರು ಯಾವುದೇ ಹೋರಾಟಕ್ಕೆ ಬರುವುದಿಲ್ಲ. ಬೆಳಗ್ಗೆ ಎದ್ದರೆ ಕಸ, ನಾಯಿಯ ಬಗ್ಗೆ ವಾಟ್ಸಪ್, ಇನ್‌ಸ್ಟಾಗ್ರಾಂ, ಟ್ವೀಟ್ಟರ್ ಮಾಡುವ ಅವರು, ಇಲ್ಲಿನ ರೈತರ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾವೇರಿ ಪ್ರಾಧಿಕಾರ, ಜಲಸಂಪನ್ಮೂಲ ಸಚಿವರಿಗೆ ಮಾಹಿತಿ ಕೊಡಿ. ಇಲ್ಲದಿದ್ದರೆ ಮಾರ್ಚ್ ವೇಳೆಗೆ ನೀವು ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net