

ಮಂಡ್ಯ: ನ್ಯಾಯಯುತ ನೀರಿನ ಹಕ್ಕಿಗಾಗಿ ಆಗ್ರಹಿಸಿ ಕಾವೇರಿ ನದಿ ರಕ್ಷಣಾ ಸಮಿತಿ ವತಿಯಿಂದ ಏ.5ರಂದು ಬೆಂಗಳೂರಿನ ಕೆ.ಆರ್.ರಸ್ತೆಯ ಕೆಂಪೇಗೌಡ ಆಸ್ಪತ್ರೆ ಆವರಣದಲ್ಲಿ ಒಂದು ದಿನದ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಕೆ.ರಾಮು ತಿಳಿಸಿದರು.
ನೂರು ವರ್ಷದ ಹಿಂದೆ ರಚಿಸಲಾದ ಆದೇಶದ ಮೇಲೆ ನೀರು ಹಂಚಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ಒತ್ತಡ ಹೇರಲು ಸಮಿತಿ ಮುಂದಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಲೋಕಸಭಾ ಸದಸ್ಯರಾದ ಡಾ.ಸಿ.ಎನ್.ಮಂಜುನಾಥ್, ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ವಿಶ್ರಾಂತ ನ್ಯಾಯಾಧೀಶರಾದ ವಿ.ಗೋಪಾಲಗೌಡ, ಎ.ಜೆ.ಸದಾಶಿವ, ಚಂದ್ರಶೇಖರಯ್ಯ ಭಾಗವಹಿಸಲಿದ್ದಾರೆ ಎಂದರು.
ಬೆಳಗ್ಗೆ 11.30ಕ್ಕೆ ವಿಚಾರ ಸಂಕಿರಣದ ಸಾನಿಧ್ಯವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಲೋಕಸಭಾ ಸದಸ್ಯ ಸುನೀಲ್ ಬೋಸ್ ಭಾಗವಹಿಸುವರು. ವಿಧಾ ಪರಿಷತ್‌ನ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್‌ಗಳಾದ ಜಯಪ್ರಕಾಶ್, ರಾಮಯ್ಯ, ವೆಂಕಟರಾಮು ವಿಷಯ ಮಂಡನೆ ಮಾಡಲಿದ್ದು, ಹಿರಿಯ ವಕೀಲರಾದ ಕೆ.ವಿ.ಧನಂಜಯ, ಆರ್.ಎಸ್.ರವಿ ‘ಕಾವೇರಿ ನದಿ ರಕ್ಷಣೆ’ ಬಗ್ಗೆ ವಿಷಯ ಮಂಡನೆ ಮಾಡುವರು. ರೈತ ಹೋರಾಟಗಾರರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಸುನಂದಾ ಜಯರಾಂ, ಕೆ.ಬೋರಯ್ಯ, ಅಂಜನರೆಡ್ಡಿ, ಎಚ್.ಲೋಕೇಶ್ ವಿಷಯ ಮಂಡನೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.
ಸಂಜೆ 4ಕ್ಕೆ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಮಾಧಾರ ಚೆನ್ನಯ್ಯ ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭವಿರಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಿ.ಪರಮೇಶ್ವರ್, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್‌ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಸಮಿತಿಯ ಕಾರ್ಯಾಧ್ಯಕ್ಷರಾದ ಸಿ.ಡಿ.ಗಂಗಾಧರ, ಸಿದ್ದರಾಮೇಗೌಡ, ಅಶೋಕ್ ಜಯರಾಂ, ಸದಸ್ಯ ಚಿದಂಬರ್, ನಗರಸಭೆ ಮಾಜಿ ಸದಸ್ಯೆ ಪದ್ಮಾವತಿ, ಸಾತನೂರು ವೇಣುಗೋಪಾಲ್, ಜಗದೀಶ್ ಉಪಸ್ಥಿತರಿದ್ದರು.