

ಮಡಿಕೇರಿ: ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮ ವತಿಯಿಂದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕಾವೇರಿ ನದಿ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕರು, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಅರಮೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಶ್ರೀರಂಗಪಟ್ಟಣದ ಡಾ.ಬಾನುಪ್ರಕಾಶ್ ಶರ್ಮ, ಅಖಿಲ ಭಾರತ ಸನ್ಯಾಸಿಗಳ ಸಂಘದ ಸಂಸ್ಥಾಪಕ ರಮಾನಂದ ಸ್ವಾಮೀಜಿ ಇತರರು ಕಾವೇರಿ ನದಿ ಉತ್ಸವಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ಶ್ರೀ ಮಹಾಗಣಪತಿ, ಶ್ರೀ ಅಗಸ್ತೇಶ್ವರ ದೇವಾಲಯಗಳಿಗೆ ಪೂಜೆ ಸಲ್ಲಿಸಿ, ಬಳಿಕ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ತಾಯಿ ಕಾವೇರಿ ಮಾತೆಯಲ್ಲಿ ವಿಸೇಷ ಪ್ರಾಥನೆ ಸಲ್ಲಿಸಿದರು.
ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಾವೇರಿ ನದಿಯು ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿ ಮೂಲಕ ಸುಮಾರು ೮೦೦ ಕಿ.ಮೀ.ಗೂ ಹೆಚ್ಚು ಹರಿಯುತ್ತದೆ. ಆ ನಿಟ್ಟಿನಲ್ಲಿ ಕಾವೇರಿ ನದಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಕಾವೇರಿ ನದಿ ಸ್ವಚ್ಚತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಉತ್ತರದಲ್ಲಿ ಗಂಗಾ ನದಿಯಂತೆ ದಕ್ಷಿಣದಲ್ಲಿ ಕಾವೇರಿ ನದಿಗೆ ಹೆಚ್ಚಿನ ಮಹತ್ವ ಇದೆ. ಕಾವೇರಿ ನದಿಯ ಪಾವಿತ್ರ್ಯತೆ ಎಲ್ಲರೂ ಕಾಪಾಡಬೇಕು. ಆ ನಿಟ್ಟಿನಲ್ಲಿ ಜನಾಂದೋಲನ ಆಗಬೇಕು. ಕಾವೇರಿ ನದಿ ಪಾತ್ರದ ನಾಪೋಕ್ಲು, ನೆಲ್ಯಹುದಿಕೇರಿ, ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಘನ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನದಿ ದಡದಲ್ಲಿನ ಗ್ರಾಮಸ್ಥರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ಪೂಜಿಸುತ್ತೇವೆ. ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಚತಾ ಕಾರ್ಯವು ನಮ್ಮಿಂದಲೇ ಆರಂಭವಾಗಬೇಕು. ಪವಿತ್ರ ನಾಡಿನಲ್ಲಿ ನಾವು ಬದುಕುತ್ತಿರುವುದು ಪುಣ್ಯವಂತರು. ಸ್ವಚ್ಛತೆ ಕಾಪಾಡುವಲ್ಲಿ ಮನಸ್ಥಿತಿ ಬದಲಿಸಿಕೊಳ್ಳಬೇಕು. ಯಾರೇ ಆದರೂ ಸಹ ಚಿಕ್ಕವರಿದ್ದಾಗ ಇಡೀ ವಿಶ್ವವನ್ನು ಬದಲಾಯಿಸಲು ಯೋಚಿಸುತ್ತಾರೆ. ಯೌವ್ವನ ವ್ಯವಸ್ಥೆಯಲ್ಲಿ ದೇಶವನ್ನು ಬದಲಾವಣೆ ಮಾಡಲು ಚಿಂತಿಸುತ್ತಾರೆ. ಸ್ವಲ್ಪ ವರ್ಷಗಳು ಕಳೆದಂತೆ ರಾಜ್ಯವನ್ನು ಬದಲಾಯಿಸಲು ಯೋಚಿಸುತ್ತಾರೆ. ತದನಂತರ ಗ್ರಾಮ ಪರಿವರ್ತಿಸಲು ಗಮನಿಸುತ್ತಾರೆ. ನಂತರ ಮೊದಲು ನಾವು ಬದಲಾಗಬೇಕು ಎಂಬ ಮನಃ ಪರಿವರ್ತನೆ ಆಗುತ್ತದೆ. ಆದ್ದರಿಂದ ಯಾವುದೇ ಒಳ್ಳೆಯ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು ಎಂದು ವಿವರಿಸಿದರು.
ಕಾವೇರಿ ನದಿ ಸ್ವಚ್ಚತಾ ಆಂದೋಲನದ ಅಧ್ಯಕ್ಷ ಎಂ.ಎಂ.ಚಂದ್ರಮೋಹನ್ ಮಾತನಾಡಿ, ಕಾವೇರಿ ಸ್ವಚ್ಚತೆಗಾಗಿ ನ ೧೩ ರವರೆಗೆ ತಲಕಾವೇರಿಯಿಂದ ಪೂಂಪ್‌ಹಾರ್ ವರೆಗೆ ಕಾವೇರಿ ಜಾಗೃತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರ ಈ ಬಾರಿ ಕಾವೇರಿ ನದಿ ಉತ್ಸವಕ್ಕೆ ಸಹಕಾರ ನೀಡಿದೆ. ಎಲ್ಲರ ಸಹಕಾರದೊಂದಿಗೆ ಕಾವೇರಿ ನದಿ ಉತ್ಸವ ಹಾಗೂ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾಧು ಸಂತರು ಹಾಗೂ ಕಾರ್ಯಕರ್ತರ ಮೂಲಕ ಸ್ವಚ್ಚ ಕಾವೇರಿ ನದಿ ೧೨ ವರ್ಷದಿಂದ ಕಾವೇರಿ ಜಾಗೃತಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕೊಯಮತ್ತೂರಿನ ಸ್ವಾಮೀಜಿ, ಪ್ರಮುಖರಾದ ಚಿ.ನಾ.ಸೋಮೇಶ್, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಮೋಹನ್ ಕುಮಾರ್, ಶ್ರೀರಂಗಪಟ್ಟಣದ ಬಾನುಪ್ರಕಾಶ್ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಇತರರು ಇದ್ದರು.
ಮಹಾ ಆರತಿ ಕಾರ್ಯಕ್ರಮ: ಕಾವೇರಿ ನದಿ ಉತ್ಸವ ಪ್ರಯುಕ್ತ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕಾವೇರಿ ನದಿ ಸಂರಕ್ಷಣಾ ಅಭಿಯಾನದ ಸಂಯೋಜಕರಾದ ಬಾನುಪ್ರಕಾಶ್ ಶರ್ಮರವರು ವಿಶೇಷ ಪೂಜೆ ಸಲ್ಲಿಸಿದರು. ಮಹಾ ಅಭಿಷೇಕ, ಮಹಾ ಆರತಿ ವಿಶೇಷ ಪೂಜೆಯನ್ನು ಜತೆಗೆ ಬಾಗಿನವನ್ನು ತ್ರಿವೇಣಿ ಸಂಗಮದಲ್ಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲ ರೀನಾ ಪ್ರಕಾಶ್, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷೆ ಪೆಮಿತಾ, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಇತರರು ಇದ್ದರು.