ತಮಿಳುನಾಡಿಗೆ ನೀರು ಹರಿಸಿದ್ದಕ್ಕೆ ಆಕ್ರೋಶ: ಭಾರತೀಯ ಕಿಸಾನ್ ಸಂಘದಿಂದ ಉಪವಾಸ ಸತ್ಯಾಗ್ರಹ

1 (1)
Published on

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಬುಧವಾರ ನಗರದಲ್ಲಿ ಭಾರತೀಯ ಕಿಸಾನ್ ಸಂಘದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಸರ್‌ಎಂವಿ ಪ್ರತಿಮೆ ಎದುರು ಧರಣಿ ನಡೆಸಿದ ಸಂಘದ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗದೇ ಕೇವಲ 113 ಅಡಿಗೆ ಬರುವಷ್ಟರಲ್ಲಿಯೇ ಮಳೆ ನಿಂತು ಹೋಯಿತು. ಆದರೂ ಒಂದು ಅವಧಿಯ ಭತ್ತದ ಬೆಳೆಗೆ ತೊಂದರೆ ಆಗುವುದಿಲ್ಲ ಎಂಬ ಆಶಾಭಾವನೆಯಿಂದ ರೈತರು ಭತ್ತದ ಬಿತ್ತನೆಯಲ್ಲಿ ತೊಡಗಿದ್ದರು. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ ಭಾಗವಹಿಸುವ ಉದ್ದೇಶದಿಂದ ಆ.9ರಂದು ನಾಟಕೀಯ ಸಭೆ ನಡೆಸಿ ಕಾವೇರಿ ನೀರಾವರಿ ನಿಗಮದಿಂದ ಕಟ್ಟು ಪದ್ಧತಿ ಆಡಿಯಲ್ಲಿ ನೀರು ಹರಿಸುವುದಾಗಿ ಆದೇಶ ಹೊರಡಿಸಿ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಪ್ರಾಧಿಕಾರ ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ಹಾಗೂ ಒಳ ಹರಿವಿನ ಪ್ರಮಾಣ ಗಮನಿಸಿ ಕೆಳಭಾಗದ ರಾಜ್ಯಕ್ಕೆ ನೀರು ಹರಿಸುವ ಬಗ್ಗೆ ಕರ್ನಾಟಕವೇ ನಿರ್ಧರಿಸಲಿ ಎಂದಿತು. ಇದನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತು. ಪ್ರಾಧಿಕಾರದ ಆದೇಶವಿಲ್ಲದಿದ್ದರೂ ವಿರೋಧ ಪಕ್ಷಗಳು ಹೇಳುವಂತೆ ರಾಜಕೀಯ ಹಿತಾಸಕ್ತಿಗೋಸ್ಕರ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಎಂದು ನೆಪ ಹೇಳಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ದುರುದ್ದೇಶಪೂರ್ವಕವಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು, ಅಪ್ಪಾಜಣ್ಣ, ವೆಂಕಟೇಶ್, ಪುಟ್ಟಮ್ಮ, ಶ್ರೀಕಂಠ, ದಿವ್ಯಾ, ನಂದೀಶ್, ರಾಜಶೇಖರ್, ಜೋಗಿಗೌಡ, ಪಾಪೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net