ಕಾವೇರಿ ಹೋರಾಟ ಬೆಂಬಲಿಸಿ ಮಹಿಳೆಯರಿಂದ ಉಪವಾಸ: ನಗರದಲ್ಲಿ ಮುಂದುವರೆದ ಅನಿರ್ದಿಷ್ಟಾವಧಿ ಚಳವಳಿ

Cauvery protest Women's hunger strike mandya
Published on

ಮಂಡ್ಯ: ತಮಿಳುನಾಡಿಗೆ ನೀರು ಹರಿಸಬೇಕೆಂದು ಆದೇಶಿಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ಆರನೇ ದಿನ ಮಹಿಳೆಯರು ಪಾಲ್ಗೊಂಡರು.

ಸರ್‌ಎಂವಿ ಪ್ರತಿಮೆ ಎದುರು ಉಪವಾಸದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಸುಜಾತಾಕೃಷ್ಣ, ಪುಟ್ಟಮ್ಮ ಸ್ವರ್ಣಸಂದ್ರ, ಸತ್ಯಭಾಮ ಅರುವನಹಳ್ಳಿ, ಆರ್.ಶೋಭಾ ವೆಂಕಟೇಶ್, ಶಶಿಮಣಿ ಲೋಲಾಪತಿ, ಸರಳ ಕುಮಾರ್, ವೈ.ಜಿ.ರತ್ನಮ್ಮ, ಗಾಯತ್ರಿ ಉಪವಾಸ ನಿರತರಾಗಿ ಹೋರಾಟ ಬೆಂಬಲಿಸಿದರು.

ತಮಿಳುನಾಡಿಗೆ ನಿರಂತರ ನೀರು ಹರಿಸುವುದನ್ನು ಕಾಯಕ ಮಾಡಿಕೊಂಡಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಕಾವೇರಿ ಬಗ್ಗೆ ಚರ್ಚಿಸಿ ದೃಢ ನಿಲುವು ಮಾಡಬೇಕು. ಇದೇ ರೀತಿ ನಿರ್ಲಕ್ಷೃ, ಬೇಜವಾಬ್ದಾರಿತನ ಪ್ರದರ್ಶಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು. ಕೇಂದ್ರ ಸರ್ಕಾರ ಸಹ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರೆಸಿದೆ. ಸೌಹಾರ್ದಯುತ ಪರಿಹಾರ ರೂಪಿಸಲು ಮುಂದಾಗಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ತಾತ್ಕಾಲಿಕ ಪರಿಹಾರ ರೂಪಿಸಬಹುದಿತ್ತು. ಇದುವರೆಗೂ ಮೌನ ಮುರಿಯದಿರುವುದು ಸರಿಯಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net