ಕರ್ನಾಟಕ ಉಳಿಸಿ, ರೈತರಿಗೆ ಬೆಂಬಲ ಕೊಡಿ: ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್

Cauvery Protest mandya
Published on

ಮಂಡ್ಯ: ಕಾವೇರಿ ವಿವಾದ ಅಂತ್ಯಕ್ಕಾಗಿ ಹೋರಾಟ ನಡೆಯಲೇಬೇಕು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಕರ್ನಾಟಕ ಉಳಿಸಿ ರೈತರಿಗೆ ಬೆಂಬಲ ಕೊಡಿ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಮಾತನಾಡಿದ ಅವರು, ಹಿಂದೆ ಜಿ.ಮಾದೇಗೌಡರು, ಎಚ್.ಡಿ.ಚೌಡಯ್ಯ, ಶಂಕರಗೌಡ ಅವರು ಕಾವೇರಿ ಹೋರಾಟ ಮಾಡಿದ್ದಾರೆ. ಮಂಡ್ಯದಲ್ಲಿ ಪ್ರಾಮಾಣಿಕ ಜನರಿದ್ದಾರೆ. ನಂಬಿಕೆಗೆ ಬಹಳ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ರೈತರನ್ನ ನೋಯಿಸಬಾರದು. ಮಂಡ್ಯದ ರೈತರು ಪ್ರಾಮಾಣಿಕವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಹಿಂದಿನ ರಾಜಕಾರಣಿಗಳು ಪ್ರಾಮಾಣಿಕವಾಗಿ ಇದ್ದರು. ಇವಾಗ ಬರಿ ಭ್ರಷ್ಟಾಚಾರವೇ ತುಂಬಿದೆ ಎಂದರು.

ರೈತರು ಏನೇ ಹೋರಾಟ ಮಾಡಿದರೂ ನಮ್ಮ ಬೆಂಬಲ ಇದೆ. ನಿಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟು ಕರ್ನಾಟಕದ ಬಂದ್ ಮಾಡಲಾಗಿತ್ತು. ಕಾವೇರಿ ನಮಗೆ ಸಂಬಂಧವಿಲ್ಲ ಎನ್ನಬಾರದು. ನಾವೆಲ್ಲ ಒಂದೇ ರೀತಿಯ ಹೋರಾಟ ಮಾಡಬೇಕು. ರಾಜ್ಯ ಸರ್ಕಾರ ನೀರು ಬೀಡುತಲ್ಲೆ ಇದೆ, ನೀರು ನಿಲ್ಲಿಸಿಲ್ಲ. ಯಾರು ಏನು ಮಾಡಿಕೊಳ್ಳುತ್ತಾರೆಂದು ಬರಿ ಕಥೆ ಹೇಳುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳಬೇಕು. ಸಿದ್ದರಾಮಯ್ಯಗೆ ಇಂತಹ ಸಂದರ್ಭ ಜೀವನದಲ್ಲಿ ಸಿಗಲ್ಲ. ಯಾರ ಮಾತನ್ನ ಕೇಳದೆ ನೀರು ಬಿಡಲ್ಲವೆಂದು ಹೇಳಬೇಕು. ಅಧಿಕಾರ ಹೋಗುತ್ತಾ ಹೋಗಲಿ, ಮುಖ್ಯಮಂತ್ರಿ ಸ್ಥಾನದಿಂದ ನಿಮ್ಮನ್ನ ತೆಗೆಯಲು ಸಾಧ್ಯವಿಲ್ಲ. ರಾಜ್ಯಪಾಲ ಆಳ್ವಿಕೆ ತರುತ್ತಾರಾ ತರಲಿ. ಸರ್ಕಾರ ತೆಗೆದು ನೀರು ಬಿಡಲು ಆಗಲ್ಲ. ಸಿದ್ದರಾಮಯ್ಯಗೆ ಅದ್ಬುತ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಈ ರಾಜ್ಯ ರೌಡಿಗಳ ಕೈಗೆ ಹೋಗುತ್ತದೆ. ರೌಡಿಗಳು ಚುನಾವಣೆಗೆ ನಿಲ್ಲುತ್ತಾರೆ. ಅವರ ಗುರುತು ಲಾಂಗ್. ರೌಡಿಗಳೆ ಮುಖ್ಯಮಂತ್ರಿ ಆಗುತ್ತಾರೆ. ಅಧಿಕಾರಿಗಳನ್ನ ಬಳಕೆ ಮಾಡಿಕೊಂಡು ಅಟ್ಟಹಾಸ ನಡೆಸುತ್ತಾರೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕವನ್ನು ಕಡೆಗಣಿಸಿದ್ದಾರೆ. ಬಿಜೆಪಿಯವರು ಬರೀ ಮಾತು. ನರೇಂದ್ರ ಮೋದಿ ಅವರೇ ಎರಡು ರಾಜ್ಯಗಳ ಮಾಹಿತಿ ತರಿಸಿಕೊಳ್ಳಲಿ. ಈ ಕೂಡಲೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿ. ಬಂಗಾರಪ್ಪ ಅವರಿಗೆ ಬಿಡದಂತೆ ಹೇಳಿದ್ದು ನಾನೇ. ಅದೇನೇ ಆಗಲಿ ನೀರು ಬಿಡಬೇಡಿ ಎಂದಿದ್ದೆ. ಅದೇ ರೀತಿ ಸಿದ್ದರಾಮಯ್ಯನವರೇ ದಿಟ್ಟ ನಿರ್ಧಾರಕ್ಕೆ ಬನ್ನಿ. ಸರ್ಕಾರ ವಜಾ ಮಾಡಿ, ಜನರನ್ನು ಎದುರುಹಾಕಿಕೊಂಡು ನೀರು ಬಿಡಲು ಸಾಧ್ಯವಿಲ್ಲ. ಇದೊಂದು ಒಳ್ಳೆ ಅವಕಾಶ. ನಿಮ್ಮ ನಿರ್ಧಾರ ಐತಿಹಾಸಿಕ ಪುಟ ಸೇರಲಿದೆ ಎಂದು ಹೇಳಿದರು.

ಸಮಿತಿಯ ಸುನಂದಾ ಜಯರಾಂ, ಒಕ್ಕೂಟದ ಕೆ.ಆರ್.ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net