

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಗೆ ತಾತ್ಕಾಲಿಕ ವಿರಾಮ ನೀಡಿದೆ.
ನಗರದ ಸರ್‌ಎವಿ ಪ್ರತಿಮೆ ಎದುರು ನಡೆಯುತ್ತಿದ್ದ ಹೋರಾಟವನ್ನು 151ನೇ ದಿನಕ್ಕೆ ಹಿಂಪಡೆಯಲಾಯಿತು. 2023 ಆ.31ರಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ನಾಡಗೀತೆಗೆ ಗೌರವ ಸಲ್ಲಿಸುವ ಮೂಲಕ ಅಂತ್ಯಗೊಳಿಸಿದ್ದಾರೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ನದಿ ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರದ ಆದೇಶ ಹಾಗೂ ರಾಜ್ಯದ ಹಿತ ಕಾಪಾಡದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಡೆದ ನಿರಂತರ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದೇವೆ. ನೀರು ಬಿಡುವ ಆದೇಶ ನಿಲ್ಲಿಸುವವರೆಗೂ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಹೇಳಲಾಗಿದೆ. ಅದರಂತೆ ಪ್ರಾಧಿಕಾರ ಕರ್ನಾಟಕದ ಸಂಕಷ್ಟ ಪರಿಸ್ಥಿತಿಯನ್ನು ಅರಿತು ನೀರು ಹರಿಸಲು ಆದೇಶ ಮಾಡಿಲ್ಲ. ಅದೇ ರೀತಿ ಮೇಕೆದಾಟು ಯೋಜನೆ ವಿಚಾರದಲ್ಲಿ ತಜ್ಞರ ಸಮಿತಿಗೆ ಒಪ್ಪಿಸಿದೆ. ಇದರಿಂದ ಕರ್ನಾಟಕದ ಮಟ್ಟಿಗೆ ಕೊಂಚ ನಿರಾಳತೆ ದೊರೆತಿದೆ. ಮುಂದಿನ ದಿನಗಳಲ್ಲಿ ನೀರು ಹರಿಸಲು ಆದೇಶಿಸಿದರೆ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು,
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಸರ್ಕಾರ ತನ್ನ ಜವಾಬ್ದಾರಿಯುತ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರಕ್ಕೆ ವಾಸ್ತವತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲವಾಯಿತು. ಅಷ್ಟೇ ಅಲ್ಲದೆ ಜಲಾಶಯದಲ್ಲಿ ನೀರಿಲ್ಲದಿದ್ದರೂ, ರೈತರ ಬೆಳೆ ಒಣಗುತ್ತಿದ್ದರೂ ಕುಡಿಯಲು ನೀರು ಸಹ ಇಲ್ಲದಂತೆ ತಮಿಳುನಾಡಿಗೆ ನೀರು ಹರಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು ರೈತರ ಹಿತ ಕಾಪಾಡಲಾಗುವುದು, ಬೆಳೆ ರಕ್ಷಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಚಳವಳಿ ಅಂತ್ಯಗೊಳಿಸಿ ಎಂದು ಹೇಳಲಿಲ್ಲ. ಇದರಿಂದ ಹೋರಾಟವನ್ನು ಮುಂದುವರಿಸುವ ಅನಿರ್ವಾರ್ಯತೆ ಎದುರಾಯಿತು. ಅವರು ಭರವಸೆ ನೀಡಿದಂತೆ ನಡೆದುಕೊಳ್ಳಲಿಲ್ಲ, ವಿಧಾನಮಂಡಲದ ಅಧಿವೇಶನದಲ್ಲಿಯೂ ಚರ್ಚಿಸಲಿಲ್ಲ. ದೃಢ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಹಾಗೂ ವಿಧಾನಪರಿಷತ್ ಸದಸ್ಯ ಮರೆತಿಬ್ಬೇಗೌಡ ಸದನದಲ್ಲಿ ಕಾವೇರಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ಇನ್ನುಳಿದ ಜಿಲ್ಲೆಯ ಶಾಸಕರು ತುಟಿ ಬಿಚ್ಚಲಿಲ್ಲ. ಪ್ರತಿಪಕ್ಷ ಶಾಸಕರು ಸಹ ಬಾಯಿ ಬಿಡಲಿಲ್ಲ. ಸಂಸದೆ ಧರಣಿ ಸ್ಥಳಕ್ಕೆ ಬರಲಿಲ್ಲ ಎಂಬ ಬಗ್ಗೆ ಬೇಸರ ಇಲ್ಲ. ಆದರೆ ಸಂಸತ್ತಿನಲ್ಲಿ ದನಿ ಮಾಡಲಿಲ್ಲ. ರಾಜ್ಯದ ಸಂಸದರನ್ನು ಒಗ್ಗೂಡಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ನಿಯೋಗ ತೆರಳಿ ರಾಜ್ಯದ ಹಿತ ಕಾಪಾಡುವ ಕೆಲಸವನ್ನು ಮಾಡಲಿಲ್ಲ. ಚುನಾಯಿತ ಜನಪ್ರತಿನಿಧಿಗಳು ಬೇಜವಾಬ್ದಾರಿ ಪ್ರದರ್ಶಿಸಿ ಹೊಣಗೇಡಿತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.
ಚಳವಳಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ತಮಿಳುನಾಡಿಗೆ ನೀರುಹರಿಸಲು ಆದೇಶ ಹೊರ ಬಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು. ಇದಕ್ಕಾಗಿ ನಾವು ಸದಾಕಾಲ ಎಚ್ಚರದಿಂದ ಇರುತ್ತೇವೆ. ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದ ನಡೆಯನ್ನು ಗಮನಿಸುತ್ತಿರುತ್ತೆವೆ. ಕಾವೇರಿ ನೀರಿಗಾಗಿ ನಡೆದ ಸುದೀರ್ಘ ಹೋರಾಟಕ್ಕೆ ಬೆಂಬಲ ಸೂಚಿಸಿದ ಜಿಲ್ಲೆಯ ಎಲ್ಲರಿಗೂ ಧನ್ಯವಾದ. ಇದಲ್ಲದೆ ರಾಜ್ಯಸರ್ಕಾರ ಮೇಕೆದಾಟು ಯೋಜನೆಯನ್ನು ಶೀಘ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ದಸಂಸ ಎಂ.ವಿ.ಕೃಷ್ಣ, ತೂಬಿನಕೆರೆ ಲಿಂಗರಾಜು, ಫಯಾಜ್ ಇತರರಿದ್ದರು.