

ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸೋಮವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಕರಪತ್ರ ಚಳವಳಿ ನಡೆಸಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 119ನೇ ದಿನ ಪೂರೈಸಿತು. ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕರಪತ್ರ ಹಂಚಿಕೆಗೆ ಚಾಲನೆ ನೀಡಲಾಯಿತು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕಾವೇರಿ ಕುಟುಂಬದ ಸದಸ್ಯ ಪ್ರೊ.ಕೆ.ಸಿ ಬಸವರಾಜ್ ಚಾಲನೆ ನೀಡಿದರು.
ಇದೇ ವೇಳೆ ಪ್ರೊ.ಕೆ ಸಿ.ಬಸವರಾಜ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಧಾನಿ ಮುಂದೆ ಮಾತನಾಡಲು ಕರ್ನಾಟಕದ ಸಂಸದರಿಗೆ ಹಿಂಜರಿಕೆ ಇದೆ. ಕಾರಣ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದ ಕಾವೇರಿ ವಿವಾದದ ಬಗ್ಗೆ ಬಾಯಿ ಬಿಡುತ್ತಿಲ್ಲ. ಪರಿಣಾಮ ಕರ್ನಾಟಕದ ಪರ ಸಂಸತ್ತಿನಲ್ಲಿ ಧ್ವನಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಹೋರಾಟ ಮಾಡುತ್ತವೆ. ಅದರಿಂದಾಗಿ ದೆಹಲಿಯಲ್ಲಿ ಅವರ ಪ್ರಭಾವವಿದೆ. ಆದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ಸಂಕಷ್ಟದ ಸಮಯದಲ್ಲಿ ರೈತರ ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನ್ಯಾಯ ಮಂಡಳಿಯ ಅಂತಿಮ ತೀರ್ಪಿನಲ್ಲಿ ಸಂಕಷ್ಟ ಸೂತ್ರ ಇದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದಲ್ಲಿ ಸಂಕಷ್ಟ ಸೂತ್ರ ವಿಚಾರ ಪ್ರಸ್ತಾಪಿಸಿ ಸಮರ್ಥವಾದ ಮಂಡಿಸಲು ವಿಫಲವಾಗಿದೆ ಎಂದು ಟೀಕಿಸಿದರು.
ರಾಜ್ಯದ ನಾಲ್ಕು ಜಲಾಶಯಗಳಲ್ಲಿ 100 ಟಿಎಂಸಿ ನೀರು ಸಂಗ್ರಹ ಇಟ್ಟುಕೊಂಡು ಮಳೆ ಕೊರತೆಯಿಂದ ಸಂಕಷ್ಟದ ಸನ್ನಿವೇಶ ಎದುರಾದಾಗ ಬಳಕೆ ಮಾಡಿಕೊಳ್ಳಬಹುದು. ಜತೆಗೆ ಸಂಕಷ್ಟದ ಸನ್ನಿವೇಶದಲ್ಲಿ ಇರುವ ನೀರನ್ನು ಎರಡು ರಾಜ್ಯಗಳು ಹಂಚಿಕೊಳ್ಳಬೇಕು ಎಂದು ಹೇಳಲಾಗಿದೆ. ಅಂತೆಯೇ ಸಂಕಷ್ಟ ಸೂತ್ರದಂತೆ ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ 31 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ತಮಿಳುನಾಡಿಗೆ ಇದುವರೆಗೆ 62 ಟಿಎಂಸಿ ನೀರು ಹರಿಸಿದೆ. ಜನವರಿಯಲ್ಲಿ ಮೂರು ಟಿಎಂಸಿ ನೀರು ಬಿಡಬೇಕಾಗಿದೆ ಎಂದು ಹೇಳಿದರು.
ತ.ನಾಡು ರೈತರೇ ಕಾವೇರಿ ನೀರನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಅಲ್ಲಿನ ರಾಜಕೀಯ ಪಕ್ಷಗಳು ಇವೆ. ಜತೆಗೆ ಇಚ್ಚಾಸಕ್ತಿ ಪ್ರದರ್ಶನ ಮಾಡುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿ ರಾಜಕಾರಣಿಗಳಿಗೆ ಇಚ್ಛಾಸಕ್ತಿ ಕೊರತೆ ಇದೆ. ಇನ್ನು ಮುಂದಾದರೂ ಸರ್ಕಾರ ಹಾಗೂ ಪ್ರತಿಪಕ್ಷಗಳು ಕಾವೇರಿ ನೀರಿನ ವಿಚಾರದಲ್ಲಿ ಬದ್ಧತೆ ತೋರುವುದರ ಜತೆಗೆ ಕಾವೇರಿ ನೀರು ನಮ್ಮದು ಎಂಬುದನ್ನು ಸಾರಬೇಕಿದೆ. ನೀರಿನ ವಿಚಾರದಲ್ಲಿ ನ್ಯಾಯ ಸಿಗದೇ ಎರಡು ತಲೆಮಾರಿನ ಜನರ ಬದುಕನ್ನು ನಾಶವಾಗಿದೆ. ಆದ್ದರಿಂದ ಸರ್ಕಾರ ಎಚ್ಚರಿಕೆ ವಹಿಸಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಮುಂದಾಗಬೇಕೆಂದು ಆಗ್ರಹಿಸಿದರು.
ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, 119 ದಿನದಿಂದ ಕಾವೇರಿ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆದರೆ ರಾಜ್ಯಸರ್ಕಾರ ಇದುವರೆಗೂ ಧರಣಿ ನಿರತ ರೈತ ಹಿತರಕ್ಷಣಾ ಪದಾಧಿಕಾರಿಗಳು ಅಥವಾ ಹೋರಾಟಗಾರರೊಂದಿಗೆ ಸಭೆ ಕರೆದು ಸಮಾಲೋಚನೆ ನಡೆಸಿಲ್ಲ. ಇದು ಸರ್ಕಾರದ ನಿರ್ಲಕ್ಷೃತನ ಧೋರಣೆಯಾಗಿದೆ. ಜತೆಗೆ ರೈತರ ಬಗ್ಗೆ ಕಾಳಜಿ ಇಲ್ಲ ಎನ್ನುವುದನ್ನು ತೋರಿಸುತ್ತಿದೆ. ಬರಗಾಲವಿದ್ದರೂ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಶೀಘ್ರವೇ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಾಧಿಕಾರದ ಆದೇಶ ಖಂಡಿಸಿ ಧರಣಿ ಮುಂದುವರೆದಿದೆ. ನಮ್ಮ ರಾಜ್ಯ ಸಂಕಷ್ಟವನ್ನು ಎದುರಿಸುತ್ತಿದ್ದರೆ, ತಮಿಳುನಾಡು ಸುಸ್ಥಿತಿಯಲ್ಲಿದ್ದು ಮಳೆಯಿಂದ ಪ್ರವಾಹ ಬರುತ್ತಿದೆ. ಹಾಗಿದ್ದರೂ ನೀರು ಹರಿಸಿ ಎಂದರೆ ಹೇಗೆ?. ಕರ್ನಾಟಕ ವಿರುದ್ಧ, ತಮಿಳುನಾಡಿನ ಪರವಾಗಿ ಪ್ರಾಧಿಕಾರ ನಿರ್ಣಯ ಕೈಗೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಳವಳಿಯ ಮುಂದಿನ ರೂಪುರೇಷೆಗಳನ್ನು ನಿರ್ಧರಿಸಬೇಕಿದೆ ಎಂದರು.
ಧರಣಿಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಬನ್ನೂರು ನಾರಾಯಣ, ಕೃಷ್ಣಪ್ರಕಾಶ್, ಅಂಬುಜಮ್ಮ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಇತರರಿದ್ದರು.