ತ.ನಾಡಿಗೆ ನೀರು ಬಿಡಲು ಆದೇಶ: ಕತ್ತೆಗಳಿಗೆ ರಾಜ್ಯಸರ್ಕಾರ, ಕೇಂದ್ರ ಸರ್ಕಾರ, ಪ್ರಾಧಿಕಾರದ ಹೆಸರು ನಾಮಕರಣ

Cauvery Protest
Published on

ಮಂಡ್ಯ: ಕೆಆರ್‌ಎಸ್ ಡ್ಯಾನಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಅರೆಬೆತ್ತಲೆಯಾಗಿ ಕತ್ತೆ ಚಳವಳಿ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಅವುಗಳಿಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಎಂದು ನಾಮಕರಣ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ರೈತರು, ಕೆಆರ್‌ಎಸ್‌ನಿಂದ ನೀರು ಬಿಡುವ ಮೂಲಕ ರೈತರ ಜೀವನಕ್ಕೆ ಕಂಟಕರಾಗಿದ್ದಾರೆ ಎಂದು ಟೀಕಿಸಿದರು.

ರೈತರ ಪಾಲಿಗೆ ಮಂಡ್ಯ ಜಿಲ್ಲೆಯ ಶಾಸಕರು, ಸಂಸದರು ಸತ್ತು ಹೋಗಿದ್ದಾರೆ. ನೀರು ಬಿಡುತ್ತಿದ್ದರೂ ಬಾಯಿ ಮುಚ್ಚಿಕೊಂಡಿದ್ದು, ತಮ್ಮ ಪಕ್ಷದ ಸರ್ಕಾರದ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರಿಗೆ ದ್ರೋಹ ಮಾಡಿದ್ದಾರೆ. ಡ್ಯಾಂನಿಂದ 5 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಈಗಾಗಲೇ ನಿರಂತರವಾಗಿ ನೀರು ಹರಿಸಿದ ಪರಿಣಾಮ ಜಲಾಶಯದಲ್ಲಿ ನೀರು ಬರಿದಾಗಿದೆ. ಮತ್ತೆ 15 ದಿನ ನೀರು ಬಿಟ್ಟರೆ ರೈತರ ಗತಿಯೇನು?. ಕುಡಿಯಲು ನೀರು ಸಿಗುವುದೇ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹದ ಬಗ್ಗೆ ಖುದ್ದಾಗಿ ಭೇಟಿ ನೀಡಿ ಅರಿಯದೆ ನೀರು ಬಿಡಿ ಎಂದು ಆದೇಶ ಮಾಡುತ್ತಿದೆ, ಕಳೆದೊಂದು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ, ಈ ಕೂಡಲೇ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಚಂದ್ರಶೇಖರ್ ಶಿವಳ್ಳಿ, ಸುರೇಶ ಗೋಪಾಲಪುರ, ನಾಗರಾಜು ಚಿಕ್ಕಮಂಡ್ಯ, ದಿನೇಶ್, ಜವರೇಗೌಡ, ನಾಗರಾಜು ಗಾಣದಾಳು, ವಿಜಯಕುಮಾರ್, ಹೊಳಲು ಶಿವರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net