ತ.ನಾಡಿಗೆ ನೀರು ಹರಿಸಿದ್ದಕ್ಕೆ ಆಕ್ರೋಶ: ಮಂಡ್ಯದಲ್ಲಿ ಕದಂಬಸೈನ್ಯ ಕಾರ್ಯಕರ್ತರಿಂದ ಪ್ರತಿಭಟನೆ

Protest
Published on

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ನಗರದಲ್ಲಿ ಸೋಮವಾರ ಕದಂಬ ಸೈನ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಬಳಿಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ರವಾನಿಸಿದರು. ಅಂತೆಯೇ ನೀರು ಹಂಚಿಕೆ ಸಂಬಂಧ ಸಂಕಷ್ಟ ಸೂತ್ರ ಮತ್ತು ರಾಷ್ಟ್ರೀಯ ವೈಜ್ಞಾನಿಕ ಜಲ ನೀತಿ ರೂಪಿಸಲು ಒತ್ತಾಯಿಸಿದರು.

ಮಳೆ ಬಾರದೆ ಇದ್ದ ಸಮಯದಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತವನ್ನು ಬಲಿಕೊಡಲಾಗುತ್ತಿದೆ. ಇದುವರೆಗೆ ಆಡಳಿತ ನಡೆಸಿದ ಸರ್ಕಾರಗಳು ತ.ನಾಡಿಗೆ ನೀರು ಬಿಟ್ಟಿವೆ. ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿರುವುದಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಇಚ್ಛಾಶಕ್ತಿ ಕೊರತೆಯಿರುವುದು ಪ್ರಮುಖ ಕಾರಣ. ಇನ್ನು ಸಂಸತ್ ಹಾಗೂ ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಸಂಸದರು ಗಟ್ಟಿ ಧ್ವನಿ ಎತ್ತುವುದಿಲ್ಲ. ಪರಿಣಾಮ ಕನ್ನಡಿಗರು ಹೋರಾಟ ಮಾಡಿದರೂ ಏನು ಪ್ರಯೋಜನವಿಲ್ಲದಂತಾಗಿದೆ. ಅಂತೆಯೇ ನೆರೆ ರಾಜ್ಯಕ್ಕೆ ನೀರು ಹರಿಸುವ ಸರ್ಕಾರದ ನಡೆ ಬದಲಾಗುತ್ತಿಲ್ಲ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಜೀವನದಿ ಕಾವೇರಿ, ಮಹಾದಾಯಿ ನದಿ ನೀರಿನ ವಿಚಾರದಲ್ಲಿ ಸರ್ಕಾರ ಮತ್ತು ರಾಜಕಾರಣಿಗಳು ಬದ್ಧತೆ ತೋರಿಸಬೇಕು. ಇನ್ನು ಕರುನಾಡ ಕೀರ್ತಿ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆ ಕರ್ನಾಟಕದಲ್ಲಿ ಎಲ್ಲೂ ಇಲ್ಲದಿರುವುದು ಕನ್ನಡಿಗರಿಗೆ ಮಾಡಿದ ಘನಘೋರ ಅನ್ಯಾಯವಾಗಿದ್ದು, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ವಿಧಾನಸೌದ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಸ್ಥಾಪಿಸಲು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೇನೆ ಸಂಸ್ಥಾಪಕ ಬೇಕ್ರಿ ರಮೇಶ್, ರಾಜ್ಯ ಉಪಾಧ್ಯಕ್ಷ ದೇವನಹಳ್ಳಿ ದೇವರಾಜ್, ಕಾರ್ಯದರ್ಶಿ ಎನ್.ಸಿ.ಕಾಂಬಳ ವಿಜಯಪುರ, ಸಂಚಾಲಕ ಎಸ್.ಶಿವಕುಮಾರ್, ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಶಿವಕುಮಾರ್, ಮೈಸೂರು ರಾಮು, ಆರಾಧ್ಯ ಗುಡಿಗೇನಹಳ್ಳಿ, ಥಾಮಸ್ ಬೆಂಜಮಿನ್, ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net