

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ 23ನೇ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು-ಬೆಂಗಳೂರು ಹೆದ್ದಾರಿಯ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಧರಣಿ ನಡೆಸಿ ಪ್ರತಿಭಟನಾಟಕಾರರು, ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ಕೊಡಿಸುವಂತೆ ಘೋಷಣೆ ಕೂಗಿದರು. ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಜು.15ರಂದು ನಡೆಯುವ ಅಧಿವೇಶನದಲ್ಲಿ ಕಾವೇರಿ ವಿವಾದ ಸಮಸ್ಯೆ ಇತ್ಯರ್ಥಕ್ಕೆ ಚರ್ಚೆ ನಡಸಬೇಕು ಈ ಬಗ್ಗೆ ಕಾವೇರಿ ಕಣಿವೆಯ ಎಲ್ಲ ಶಾಸಕರು ಒತ್ತಾಯಿಸಬೇಕು. ರೈತರು ಯಾವ ರೀತಿ ಸಮಸ್ಯೆಗಳನ್ನು ಇಷ್ಟು ದಿನ ಎದುರಿಸಿದರೂ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಅಲ್ಪಸ್ವಲ್ಪ ಮಳೆ ಬಿಳುತ್ತಿದೆ ಎಂಬ ಕಾರಣಕ್ಕೆ ನಾವು ತೃಪ್ತಿ ಪಡುವುದಕ್ಕೆ ಆಗುವುದಿಲ್ಲ. ಅಂತೆಯೇ ಪ್ರಾಧಿಕಾರದ ಆದೇಶವನ್ನು ನಾವು ಪಾಲಿಸಲು ಸಾಧ್ಯವಾಗುವುದಿಲ್ಲ. ಹಾಗಂತ ಕೋರ್ಟ್ ಮೂಲಕ ಆದೇಶ ಹೊರಡಿಸಿದರೂ ಸಹ ಅದನ್ನು ಪ್ರಶ್ನಿಸಿ ರೈತರಿಗೆ ರಾಜ್ಯ ಸರ್ಕಾರ ನ್ಯಾಯ ದೊರಕಿಸಿಕೊಟ್ಟು ಉಳಿಸಿಕೊಳ್ಳಬೇಕು. ಜಿಲ್ಲೆಯ ನಾಲೆಗಳಿಗೆ ನೀರು ಹರಿಸಲು ಕ್ರಮ ವಹಿಸಿದೆ. ಆದರೆ ಕೊನೆ ಭಾಗದ ರೈತರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಜನ-ಜಾನುವಾರುಗಳಿಗೆ ನೀರಿನ ಅಗತ್ಯತೆಗಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಮಾತನಾಡಿ, ವ್ಯವಸಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಬೇಕು. ಆ ಮೂಲಕ ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು. ಸದನದಲ್ಲಿ ಕಾವೇರಿ ನೀರಿನ ನದಿಯ ಬಗ್ಗೆ ಅಮೂಲಾಗ್ರವಾಗಿ ಎರಡೂ ಸದನದಲ್ಲಿಯೂ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ರಾಮಕೃಷ್ಣಯ್ಯ, ದೇವೇಗೌಡ, ಮುದ್ದೇಗೌಡ, ಸೋ.ಸಿ.ಪ್ರಕಾಶ್, ರಾಮಲಿಂಗಯ್ಯ, ಅಣ್ಣೂರು ಮಹೇಂದ್ರ ಇತರರಿದ್ದರು.