

ಮಂಡ್ಯ: ಮುಂಗಾರು ಅಧಿವೇಶನದಲ್ಲಿ ಕಾವೇರಿ ನದಿ ನೀರಿನ ಸಮಸ್ಯೆ, ಕಾವೇರಿ ಕಣಿವೆ ದುಸ್ಥಿತಿ ಚರ್ಚೆ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದ ಹೋರಾಟಗಾರರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿ ಕಾವೇರಿ ನಮ್ಮದು, ರಕ್ಷಣೆ ಮಾಡಿಕೊಳ್ಳೋಣ ಎಂದು ಘೋಷಣೆ ಕೂಗಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕರ್ನಾಟಕದ ಸಂಸತ್ ಸದಸ್ಯರು ಲೋಕಸಭೆಯ ಅಧಿವೇಶನದಲ್ಲಿ ಮೇಕೆದಾಟು ಯೋಜನೆ, ಕಾವೇರಿ ಕೊಳ್ಳದ ನೀರಾವರಿ ಪ್ರದೇಶಗಳ ಅಭಿವೃದ್ಧಿ, ನೀರು ಸಂಗ್ರಹಣೆಯ ಸಾಮರ್ಥ್ಯ, ಕಾವೇರಿ ತೀರ್ಪಿನ ಪರಿಣಾಮ, ತೀರ್ಪು ಆದೇಶಗಳನ್ನು ಮಾರ್ಪಡಿಸುವ ಕುರಿತಂತೆ ಚರ್ಚೆ ಮಾಡಬೇಕು. ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಕ್ರಮ ವಹಿಸಲು ಮುಂದಾಗುವಂತೆ ಸಂಸದರು ದನಿ ಎತ್ತಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಸೋ.ಸಿ.ಪ್ರಕಾಶ್, ಮುದ್ದೇಗೌಡ, ಫಯಾಜ್, ನಾಗರಾಜು, ಶಿವಶಂಕರ್ ಸಂಪಳ್ಳಿ, ಬೋರಲಿಂಗಯ್ಯ, ಹಲ್ಲೆಗೆರೆ ಶಿವರಾಂ, ಕೆ.ಎಸ್.ಸುಧೀರ್, ನಾರಾಯಣಸ್ವಾಮಿ, ಎಂ.ಎಲ್.ತುಳಸೀಧರ್, ದೇಶಹಳ್ಳಿ ವೆಂಕಟೇಶ್, ಸಾತನೂರು ವೇಣುಗೋಪಾಲ್, ದೇವೇಗೌಡ, ಗೋಪಾಲಪುರ ಗ್ರಾಪಂ ಅಧ್ಯಕ್ಷೆ ಸವಿತಾ, ಸುಮತಿ, ವಿಜಯಾಂಬಿಕ, ಸತ್ಯಭಾಮ, ಕಮಲಾ, ಸವಿತಾ, ಲಲಿತಾ ಇತರರಿದ್ದರು.