ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದ್ದಕ್ಕೆ ಆಕ್ರೋಶ: ಮಂಡ್ಯದಲ್ಲಿ ಹೆದ್ದಾರಿ ಸಂಚಾರ ತಡೆ

1
Published on

ಮಂಡ್ಯ: ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬುಧವಾರವೂ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಯಿತು. ಈ ನಡುವೆ ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು ಹಂಚಿಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನಾಕಾರರು ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 7ನೇ ದಿನ ಪೂರೈಸಿತು. ಅಂತೆಯೇ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದ ಹಿನ್ನೆಲೆಯಲ್ಲಿ ಸಮಿತಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ದಿಢೀರ್ ಬೆಂ-ಮೈ ಹಳೇ ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದರು. ಇದರಿಂದಾಗಿ ಕೆಲವೊತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಧರಣಿ ಹಿಂಪಡೆದು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು.

ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೆ.21ಕ್ಕೆ ಮುಂದೂಡಿಕೆ ಮಾಡಿರುವುದು ನೋವಿನ ಸಂಗತಿ. ತ.ನಾಡಿಗೆ ನಿರಂತರವಾಗಿ ನೀರು ಹರಿಸಿ ಜಲಾಶಯಗಳನ್ನು ಬರಿದು ಮಾಡಲಾಗಿದೆ. ಕುಡಿಯುವ ನೀರನ್ನು ಸಹ ಬಿಡಲಾಗುತ್ತಿದೆ. ಇದರಿಂದ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ. ನ್ಯಾಯಾಲಯದ ತೀರ್ಪು ಹೊರ ಬರುವವರೆಗೂ ಪ್ರತಿನಿತ್ಯ ನೀರು ಹರಿಸುತ್ತಿದ್ದರೆ ರೈತರ ಸ್ಥಿತಿಯನ್ನು ಹೇಳತೀರದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯ ಸಂಸದೆ ಸೇರಿ ಕಾವೇರಿ ಜಲಾನಯನ ಪ್ರದೇಶದ ಎಂಟು ಜಿಲ್ಲೆಗಳ ಸಂಸದರು ರೈತರಿಗೆ ದ್ರೋಹ ಮಾಡಿದ್ದಾರೆ. ಕಾವೇರಿ ನೀರೆಲ್ಲ ಕೊಚ್ಚಿ ಹೋಗುತ್ತಿದೆ. ಈಗಲಾದರೂ ಬಾಯಿ ತೆರೆಯಿರಿ. ರಾಜ್ಯದ 28 ಸಂಸದರು ಕೇಂದ್ರಕ್ಕೆ ತೆರಳಿ ನೀರು ನಿಲ್ಲಿಸುವ ಕೆಲಸ ಮಾಡಲಿ, ಬೀದಿಗಿಳಿದು ಹೋರಾಡಲಿ. ಇನ್ನು ರಾಜ್ಯ ಸರ್ಕಾರ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ನ್ಯಾಯಾಲಯದ ಎದುರು ಸಮರ್ಥವಾದ ಮಂಡನೆಯಿಂದ ಪರಿಹಾರ ಪಡೆಯಲು ಸಾಧ್ಯವಿದೆ. ಆದರೆ ನೀರು ಹರಿಸುತ್ತಾ ರೈತರ ಬದುಕನ್ನು ಸಂಕಷ್ಟಕ್ಕೆ ದೂಡುತಿದ್ದು, ಕೇಂದ್ರ ಸರ್ಕಾರ ಎಲ್ಲವನ್ನು ಕಂಡು ಮೌನವಹಿಸಿದೆ. ಜಲಾಶಯಗಳಿಂದ ಬಿಟ್ಟಿರುವ ನೀರು ತಕ್ಷಣ ನಿಲ್ಲಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಸರ್ಕಾರದ ನಿರ್ಧಾರ ಯಾವ ರೀತಿ ಇರಲಿದೆ ನೋಡೋಣ. ಮುಂದಿನ ಹೋರಾಟದ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಅದೇ ರೀತಿ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಾತನೂರು ವೇಣುಗೋಪಾಲ್, ಕೆ.ಬೋರಯ್ಯ, ಗುರುಪ್ರಸಾದ್, ಇಂಡುವಾಳು ಚಂದ್ರಶೇಖರ್, ಇಂಡುವಾಳು ಬಸವರಾಜು, ಕನ್ನಡಸೇನೆ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net