ಕಾವೇರಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯವಾದರೂ ಸರ್ಕಾರಗಳ ಮೌನ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

Cauvery protest mandya
Published on

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ ಆಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೌನ ವಹಿಸಿವೆ ಎಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆರನೇ ಸೋಮವಾರವೂ ಪ್ರತಿಭಟನೆ ಮುಂದುವರೆಸಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಪ್ರತಿಭಟನಾ ಧರಣಿ ನಡೆಸಿದ ಸಮಿತಿ ಸದಸ್ಯರು, ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಆದರೂ ಇಲ್ಲಿನ ರೈತರ ಹಿತ ಕಾಪಾಡದೆ ನೆರೆ ರಾಜ್ಯಕ್ಕೆ ನೀರು ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಸರ್ಕಾರಕ್ಕೆ ಮೊದಲೇ ಎಚ್ಚರಿಸಿದ್ದೆವು. ಆದರೆ ನಿರ್ಲಕ್ಷೃ ತೋರಿ ನೀರು ಬಿಟ್ಟ ಪರಿಣಾಮ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿಯಿತು. ಬೆಳೆದು ನಿಂತಿರುವ ಬೆಳೆ ರಕ್ಷಣೆ, ಜನ ಜಾನುವಾರುಗಳಿಗೆ ಕುಡಿಯಲು ಇದ್ದ ನೀರನ್ನು ಹರಿಸಲಾಗುತ್ತಿದೆ. ಹೀಗಾದರೆ ಜಿಲ್ಲೆಯ ಜನರ ಪಾಡೇನು?. ರೈತರು ಜಮೀನುಗಳಲ್ಲಿ ಬೆಳೆ ಹಾಕಲು ನಿರ್ಬಂಧ ಹಾಕಿದ ಸರ್ಕಾರ, ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಬರ ಪರಿಹಾರವೂ ಕೈ ಸೇರಿಲ್ಲ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಇಂಡುವಾಳು ಬಸವರಾಜ್, ರೈತ ಸಂಘದ ಮುದ್ದೇಗೌಡ, ಕೃಷ್ಣಪ್ರಕಾಶ್, ದಸಂಸ ಎಂ.ವಿ.ಕೃಷ್ಣ, ತಾಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net