ನಗರದಲ್ಲಿ ವಾರಕ್ಕೊಮ್ಮೆ ಕಾವೇರಿ ಹೋರಾಟ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

Cauvery Protest mandya
Published on

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಾಗುತ್ತಿರುವ ಅನ್ಯಾಯ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಹಿಂಪಡೆದಿದ್ದು, ಇದೀಗ ವಾರಕ್ಕೊಂದು ದಿನ ಪ್ರತಿಭಟನೆಗೆ ಸೋಮವಾರ ಚಾಲನೆ ನೀಡಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕಯಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ನದಿ ಜಲಾಶಯ ಉಳಿವಿಗಾಗಿ ಚರ್ಚೆಯೇ ನಡೆಸದ ಸದನ, ಬಾಯಿಬಿಡದ ಸಂಸದರು ಹಾಗೂ ಶಾಸಕರ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನವನ್ನು ನಾವು ಖಂಡಿಸುತ್ತೇವೆ. ಪ್ರಾಧಿಕಾರವು ಮತ್ತೆ ತಮಿಳುನಾಡಿಗೆ ಫೆ.1ರಿಂದ 998 ಕ್ಯೂಸೆಕ್ ನೀರನ್ನು ಬಿಡುವಂತೆ ಆದೇಶ ನೀಡಿದೆ. ಇದನ್ನು ಖಂಡಿಸುತ್ತೇವೆ. ನಿರಂತರ ಧರಣಿಯನ್ನು ತಾತ್ಕಾಲಿಕವಾಗಿ ವಿರಾಮ ನೀಡಿ, ಪ್ರತಿ ಸೋಮವಾರ ಸಭೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ರೈತ ಹಿತರಕ್ಷಣಾ ಸಮಿತಿಯು ರೈತ ಸಂಘಟನೆಗೊಂದಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ವಿರುದ್ದ ಹೋರಾಟ ಮಾಡುತ್ತದೆ. ಎಲ್ಲಿಯವರೆಗೆ ಕಾವೇರಿ ನದಿ ನೀರು ಪ್ರಾದಿಕಾರದ ಆದೇಶ ಜೀವಂತವಾಗಿತ್ತದೆಯೋ, ಅಲ್ಲಿವರೆಗೂ ನಿರಂತರ ವಾರಕ್ಕೊಮ್ಮೆ ಹೋರಾಟ ನಡೆಯಲಿದೆ. ಸರ್ಕಾರದ ಮೇಲೆ ತೀವ್ರತರವಾದ ಒತ್ತಡ ತರಲಿಕ್ಕಾಗಿ ಬಾಯಿಯೇ ಬಿಡದ ಸಂಸದರ ವಿರುದ್ಧ ಹಾಗೂ ಚರ್ಚೆಯೇ ನಡೆಸದ ವಿರುದ್ದ ಹೋರಾಟ ನಡೆಸುತ್ತೇವೆ. ಇಂದು ಸಾರಿಗೆ ಬಸ್‌ಗಳಿಗೆ ಕಾವೇರಿ ನಮ್ಮದು ಎನ್ನುವ ಭಿತ್ತಿಪತ್ರಗಳನ್ನು ಅಂಟಿಸಿದ್ದೇವೆ. ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಕಾವೇರಿ ನದಿ ನೀರು ಉಳಿಸುವ ಮತ್ತು ರೈತರಿಗೆ ಆಗಿರುವ ನಷ್ಟದ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೋರಯ್ಯ, ಸುಜಾತಾ ಸಿದ್ದಯ್ಯ, ಇಂಡವಾಳು ಚಂದ್ರಶೇಖರ್, ನಾರಾಯಣಸ್ವಾಮಿ, ಮಂಜುನಾಥ್ ಕನ್ನಡಸೇನೆ, ತಾಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net