

ಮಂಡ್ಯ: ತಮಿಳುನಾಡಿಗೆ ನೀರು ಹರಿಸಬೇಕೆಂದು ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 110 ಹಾಗೂ ಸರದಿ ಉಪವಾಸ ಸತ್ಯಾಗ್ರಹ 28ನೇ ದಿನ ಪೂರೈಸಿತು.
ಸರ್‌ಎಂವಿ ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಯಶಸ್ವಿನಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ತಾವರಗೆರೆ ಸುಶೀಲಾ, ಶಾರದಾಂಬೆ, ಪಿ.ಸುಮತಿ, ಕಲ್ಲಹಳ್ಳಿ ವಿಜಯಾಂಬೆ, ಕೆಎಚ್‌ಬಿ ಕಾಲನಿಯ ಆರ್.ಸುಜಯಲಕ್ಷ್ಮೀ, ಗುತ್ತಲು ವಿ.ವಿ ಪುರಂನ ಕಮಲಾ, ವರಲಕ್ಷ್ಮೀ, ಗುನ್ನಾಯಕನಹಳ್ಳಿ ಪ್ರೇಮಾ ಮತ್ತು ಜಯಮ್ಮ ಭಾಗಿಯಾದರು.
ಹೋರಾಟ ಬೆಂಬಲಿಸಿ ಮಾತನಾಡಿದ ಬೆಂಗಳೂರಿನ ಗಾಂಧಿಭವನದ ಉಪಾಧ್ಯಕ್ಷ ಡಿ.ಬಿ.ಶಿವರಾಜು, ಇನ್ನೊಬ್ಬರ ಬದುಕನ್ನು ಉಳಿಸಿಕೊಳ್ಳಲು ಚಳವಳಿ ಮಾಡುತ್ತಿಲ್ಲ. ಬದಲಿಗೆ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಕಾವೇರಿ ಸತ್ಯಾಗ್ರಹ ಅನಿವಾರ್ಯ. ಮನೆ, ತಮ್ಮ ಬದುಕನ್ನು ಬಿಟ್ಟು ಮುಷ್ಕರದಲ್ಲಿ ತೊಡಗಿಸಿಕೊಂಡಿರುವುದು ಇನ್ನೊಬ್ಬರ ಬದುಕನ್ನು ಕಸಿದುಕೊಳ್ಳುವುದಕ್ಕಲ್ಲ. ಸತ್ಯ ಬಲಿಕೊಟ್ಟು ನಾವು ಸ್ವಾತಂತ್ರ್ಯ ಪಡೆಯುವುದಾದರೆ ದೇಶಕ್ಕೆ ಏಳಿಗೆ ಇಲ್ಲ ಎಂದು ಗಾಂಧೀಜಿ ಹೇಳಿದ್ದರು. ಹಿಂದಿನವರು ಪ್ರಯತ್ನ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಎಲ್ಲಿಯೋ ಕುಳಿತುಕೊಂಡು ಮಾಡುವ ತೀರ್ಮಾನಕ್ಕೆ ಜನ ಬಲಿಯಾಗುತ್ತಾರೆ. ಹೋರಾಟ ಮಾಡದೇ ಸುಮ್ಮನಿದ್ದರೆ ಮುಂದಿನ ಪೀಳಿಗೆ ಶಪಿಸುತ್ತದೆ. ಅದಕ್ಕೆ ನಾವು ಕಾರಣಕರ್ತರಾಗುವುದು ಬೇಡ. ಈ ಅನ್ಯಾಯದಿಂದ ವಿಮೋಚನೆ ಪಡೆಯಬೇಕಾದದ್ದು ಅವಶ್ಯಕ ಎಂದರು.
ಸ್ವಾತಂತ್ರ್ಯ ಮತ್ತು ರೈತ ಹೋರಾಟಕ್ಕೆ ಜಿಲ್ಲೆ ವಿಶೇಷ ಕೊಡುಗೆ ನೀಡಿದೆ. ನಮ್ಮ ಹೋರಾಟ ಜನಪರವಾಗಿರಬೇಕು. ಒಳಿತನ್ನು ಮಾಡದಿದ್ದರೆ ಆ ಕಾನೂನು ಏಕೆ?. ವಾಸ್ತವ ನೋಡದೆ ಮಾಡುವ ಕಾಯ್ದೆ ನಮ್ಮನ್ನು ಈ ಸ್ಥಿತಿಗೆ ತಂದಿದೆ. ಎಲ್ಲ ವರ್ಗದ ಜನ ನಿಮ್ಮೊಂದಿಗಿದ್ದಾರೆ. ನಮ್ಮ ಇತಿಮಿತಿಯಲ್ಲಿ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಬೆಂಬಲಿಸದಿದ್ದರೆ ಉತ್ತರ ಕೊಡುವ ನೈತಿಕತೆ ಕಳೆದುಕೊಳ್ಳುತ್ತೇವೆ ಎಂದರು.
ಧರಣಿಯಲ್ಲಿ ಜಿಲ್ಲಾ ರೈತ ರಕ್ಷಣಾ ಸಮಿತಿಯ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಜಿ.ಟಿ.ವೀರಪ್ಪ, ಎಸ್.ಪಿ.ನಾರಾಯಣಸ್ವಾಮಿ, ನಾಗರಾಜು, ಹೊಳಲು ಬದರಿ ನಾರಾಯಣ, ಮಹಾಂತಪ್ಪ ಇತರರಿದ್ದರು.