ಮುಂದುವರೆದ ಕಾವೇರಿ ಹೋರಾಟ: ದಸಂಸ ಪದಾಧಿಕಾರಿಗಳಿಂದ ಉಪವಾಸ ಸತ್ಯಾಗ್ರಹ

Cauvery protest mandya
Published on

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 91ನೇ ಹಾಗೂ ಉಪವಾಸ ಸತ್ಯಾಗ್ರಹ 10ನೇ ದಿನ ಪೂರೈಸಿತು.

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಶಿವರಾಜ್ ಮರಳಿಗ, ಶ್ರೀನಿವಾಸ್, ಶಂಕರ, ದೇವರಾಜು, ಅಪ್ಪಾಜಿ ಹಾಗೂ ಮಾದೇವಿ ಅವರು ಉಪವಾಸದಲ್ಲಿ ಪಾಲ್ಗೊಂಡು ಕಾವೇರಿ ಚಳವಳಿ ಬೆಂಬಲಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್ ಜಲಾಶಯ ಸೇರಿದಂತೆ ಕಾವೇರಿಕೊಳ್ಳದ ಅಣೆಕಟ್ಟು ಬರಿದಾಗುತ್ತಿರುವ ಸನ್ನಿವೇಶದಲ್ಲಿ ತ.ನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷೃ ಮನೋಭಾವ ತಾಳಿವೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಎರಡು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಸಂಕಷ್ಟ ಸೂತ್ರ ರಚಿಸುವ ಮೂಲಕ ಶಾಶ್ವತ ಪರಿಹಾರ ದೊರಕಿಸಬೇಕೆಂದು ಆಗ್ರಹಿಸಿದರು.

ರೈತ ಸಂಘದ ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಆರಂಭದ ದಿನಗಳಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಮಗ್ರವಾಗಿ ಚರ್ಚಿಸಬೇಕು. ಪ್ರತಿಪಕ್ಷಗಳು ಈ ಬಗ್ಗೆ ಎಚ್ಚೆತ್ತು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಮುಖಂಡರಾದ ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಜಯ ಕರ್ನಾಟಕ ಪರಿಷತ್‌ನ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಎಂ.ವಿ.ಕೃಷ್ಣ, ಹುರುಗಲವಾಡಿ ರಾಮಯ್ಯ, ಎಂ.ಎಲ್.ತುಳಸೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net