

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ಆರನೇ ಗ್ಯಾರಂಟಿಯಾಗಿ ರೈತರಿಗೆ ಕಡ್ಲೆಪುರಿ ಭಾಗ್ಯ ನೀಡಿದೆ ಎಂದು ಕಾವೇರಿ ಹೋರಾಟಗಾರರು ಗುರುವಾರ ಕಡ್ಲೆಪುರಿ ತಿಂದು ವಿಭಿನ್ನವಾಗಿ ಪ್ರತಿಭಟಿಸಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಿರಂತರ ಧರಣಿಯ 46ನೇ ದಿನದ ಅಂಗವಾಗಿ ಸಮಿತಿ ಸದಸ್ಯರೊಡಗೂಡಿದ ರೈತರು, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ನ್ಯಾಯ ಕೊಡುವಂತೆ ಘೋಷಣೆ ಕೂಗಿದರು. ರಾಜ್ಯಸರ್ಕಾರ ಕಡ್ಲೆಪುರಿ ಪರಿಷೆ ಇಟ್ಟು ರೈತರಿಗೆ ದ್ರೋಹ ಮಾಡಿ ದಸರಾ ಸಂಭ್ರಮದಲ್ಲಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳಿಂದ ನೆರೆ ರಾಜ್ಯಕ್ಕೆ ನಿರಂತರ ನೀರು ಹರಿಸಿ ಜಲಾಶಯಗಳನ್ನು ಬರಿದು ಮಾಡುತ್ತಿರುವ ರಾಜ್ಯಸರ್ಕಾರ ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಿಸಲು ನೀರು ನೀಡುತ್ತಿಲ್ಲ. ಹೊಸ ಬೆಳೆ ಹಾಕಲು ಅವಕಾಶ ನೀಡಿಲ್ಲ. ಇನ್ನೇನಿದ್ದರೂ ರೈತರಿಗೆ ಕಡ್ಲೆಪುರಿ ಗತಿಯಾಗಿದೆ. ಅದನ್ನೇ ತಿಂದು ಜೀವಿಸುವ ದಿನ ದೂರವಿಲ್ಲ. ಅಷ್ಟರ ಮಟ್ಟಿಗೆ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು.
ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರ ರೈತರ ಕುತ್ತಿಗೆ ಕುಯ್ಯುವ ಕೆಲಸ ಮಾಡುತ್ತಿದೆ. ಇಲ್ಲದ ನೀರನ್ನು ಬಿಡುವುದು ಹೇಗೆ?. ತಮಿಳುನಾಡು ನೀರಿನ ಹಕ್ಕು ಸ್ಥಾಪಿಸಿ ಏಕಮುಖ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಅದೇ ರೀತಿ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಪ್ರಾಧಿಕಾರದ ಆದೇಶವನ್ನು ತಿರಸ್ಕರಿಸಿ ನೀರು ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ 46 ದಿನದಿಂದ ರಾಜ್ಯದಲ್ಲಿ ಪ್ರತಿನಿತ್ಯ ಹೋರಾಟ ನಡೆಯುತ್ತಾ ಬಂದಿದೆ. ಆದರೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಜನತೆಗೆ ಅದರ ಬಗ್ಗೆ ಏನಾಯಿತು ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ರಾಜಕೀಯ ಸ್ವಾರ್ಥತೆಯಿಂದ ಜಲಾಶಯಗಳಿಂದ ಮಾತ್ರ ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿದೆ. ಸ್ವಾರ್ಥ ರಾಜಕಾರಣವನ್ನು ನಿಲ್ಲಿಸಿ ರಾಜ್ಯದ ಜನತೆ ಮತ್ತು ರೈತರ ಹಿತ ಕಾಪಾಡಲು ಮುಂದಾಗಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬೆಂಗಳೂರಿನಲ್ಲಿ ಕುಳಿತು ಏನು ಮಾಡುತ್ತಿದ್ದಾರೆ. ದೆಹಲಿಗೆ ಹೋಗಿ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಅವರನ್ನು ಭೇಟಿ ಮಾಡಲಿ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರ ಆಹವಾಲನ್ನು ಆಲಿಸಲೇಬೇಕು. ಸುಮ್ಮನೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಾಲಹರಣ ಮಾಡುವುದನ್ನು ಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ರಾಜ್ಯದ ಸಂಸದರು ಎಲ್ಲಿ ಹೋಗಿದ್ದಾರೆ. ಮಂಡ್ಯ ಸಂಸದರ ಸಾರಥ್ಯದಲ್ಲಿ ಪ್ರಧಾನಿಯನ್ನು ಭೇಟಿಯಾಗಿ, ಇಲ್ಲವೇ ರಾಷ್ಟ್ರಪತಿ ಬಳಿಯಾದರೂ ಹೋಗಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಅಂಬುಜಮ್ಮ, ಕನ್ನಡಸೇನೆ ಮಂಜುನಾಥ್, ಬೋರ್‌ವೆಲ್ ನಾರಾಯಣ್, ದಸಂಸ ಎಂ.ವಿ.ಕೃಷ್ಣ, ಇಂಡುವಾಳು ಬಸವರಾಜು, ಕೃಷ್ಣಪ್ರಕಾಶ್, ಫಯಾಜ್, ಮಹಾಂತಪ್ಪ ಇತರರಿದ್ದರು.