

ಮಂಡ್ಯ: ಕಾವೇರಿ ಕಣಿವೆ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಡೆಯಿತು.
ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 31ನೇ ದಿನ ಪೂರೈಸಿತು. ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದವು. ಅಂತೆಯೇ ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ ತ.ನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಜ್ಯಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಾಜ್ಯ ಸರ್ಕಾರದ ವರ್ತನೆ ವಿರೋಧಿಸಿ ಕೋಣನ ಮುಂದೆ ಕಿಂದರಿ ಬಾರಿಸುವ ವಿನೂತನ ಚಳವಳಿ ನಡೆಸಲಾಯಿತು. ಹಿತರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಇಬ್ಬರು ಹೋರಾಟಗಾರರು ಕೋಣದ ಮುಖ ವೇಷಧಾರಿಗಳಾಗಿದ್ದರೆ ಮತ್ತಿಬ್ಬರು ಕಿಂದರಿ ಬಾರಿಸಿ ಸರ್ಕಾರದ ವರ್ತನೆ ಖಂಡಿಸಿದರು.
ರೈತರ ಬೆಳೆಗಳಿಗೆ ನೀರು ಕೊಡಿ, ಕುಡಿಯಲು ನೀರು ನೀಡಿ, ಜಲಾಶಯಗಳಿಂದ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರು ನಿಲ್ಲಿಸಿ ಎಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾವೇರಿ ಹೋರಾಟ ನಡೆದಿದೆ. ಆದರೂ ಸಹ ಸರ್ಕಾರ ಗಾಢ ನಿದ್ರೆಯಲ್ಲಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಕನ್ನಡ ಸೇನೆ ಮಂಜುನಾಥ್, ಹೊಸಹಳ್ಳಿ ಶಿವು, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಅಂಬುಜಮ್ಮ, ದಸಂಸ ಎಂ.ವಿ ಕೃಷ್ಣ, ಸಿ.ಟಿ ಮಂಜುನಾಥ್, ಎಂ.ಎಲ್.ತುಳಸೀಧರ್ ಇತರರಿದ್ದರು.
ವಿಭಿನ್ನ ಪ್ರತಿಭಟನೆ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದ ಶಿವಕುಮಾರ್ ಆರಾಧ್ಯ ಎಂಬುವರು ಜಮೀನಿನಲ್ಲಿ ಗುಂಡಿ ತೆಗೆದು ಕುತ್ತಿಗೆವರೆಗೆ ಮುಳುಗಿ ಮಣ್ಣು ಮುಚ್ಚಿಕೊಂಡು ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.
ರಾಜ್ಯ ಸರ್ಕಾರ ತ.ನಾಡಿಗೆ ನೀರು ಹರಿಸುವ ಮೂಲಕ ರೈತರನ್ನ ಜೀವಂತ ಸಮಾಧಿ ಮಾಡುತ್ತಿದೆ. ಎಷ್ಟೇ ಹೋರಾಟ ಮಾಡಿದರೂ ನೀರು ಹರಿಸುವುದನ್ನ ನಿಲ್ಲಿಸುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಷ್ಟು ದಿನ ರಾಜ್ಯಸರ್ಕಾರ ವಿರೋಧಿ ಘೋಷಣೆ ಕೂಗಿದ್ದೇವೆ, ಇನ್ನು ಅವರ ಪರವಾಗಿ ಘೋಷಣೆ ಕೂಗುತ್ತೇವೆ. ರೈತರನ್ನ ಸಮಾಧಿ ಮಾಡುವುದನ್ನ ಬಿಟ್ಟು, ಇನ್ನಾದರೂ ನೀರು ಹರಿಸುವುದನ್ನ ನಿಲ್ಲಿಸಲಿ. ಅದೇ ರೀತಿ ವರುಣನಾ ಕೃಪೆಯಿಂದ ಜಲಾಶಯ ತುಂಬುತ್ತಿದೆ ಎಂದರು.