

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಜಿಲ್ಲಾ ರೈತ ರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಎರಡನೇ ದಿನವಾದ ಶುಕ್ರವಾರವೂ ಮುಂದುವರೆಯಿತು.
ಸರ್‌ಎಂವಿ ಪ್ರತಿಮೆ ಎದುರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಧರಣಿ ನಡೆಸಿದ ಪ್ರತಿಭಟನಾಕಾರರು, ಅಯ್ಯಯ್ಯೋ ಅನ್ಯಾಯ ಎಂದು ಬಾಯಿ ಬಡಿದುಕೊಂಡು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸಂಕಷ್ಟ ಕಾಲದಲ್ಲಿ ಮಧ್ಯ ಪ್ರವೇಶ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಒತ್ತಡ ತಂತ್ರದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಆದೇಶ ಮಾಡಿರುವುದು ಅವೈಜ್ಞಾನಿಕ. ಈಗಾಗಲೇ ತ.ನಾಡಿಗೆ 13 ಟಿಎಂಸಿ ನೀರು ಹರಿದುಹೋಗಿದೆ. ಇದೀಗ ಮತ್ತೆ 7 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕುಸಿತ ಕಾಣುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ನೀರು ಬಿಡುವುದಿರಲಿ, ಕುಡಿಯುವ ನೀರು ಇಲ್ಲದಂತಾಗುತ್ತದೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಕನ್ನಡಿಗರ ಬಗೆಗಿನ ಅಲಸ್ಯ ಮತ್ತು ತಮಿಳುನಾಡು ಒಲೈಕೆಯ ಧೋರಣೆಯಿಂದ ಕರ್ನಾಟಕ ರಾಜ್ಯದ ರೈತರ ಬಲಿಪಶು ಆಗುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಸುನಂದಾ ಜಯರಾಂ, ಬೇಕ್ರಿ ರಮೇಶ್, ಕೆ.ಬೋರಯ್ಯ, ಕೀಲಾರ ಕೃಷ್ಣ, ಕನ್ನಡ ಸೇನೆ ಮಂಜುನಾಥ್, ಜಯ ಕರ್ನಾಟಕ ಯೋಗಣ್ಣ, ಇಂಡುವಾಳು ಚಂದ್ರಶೇಖರ್, ಎಂ.ಎಲ್.ತುಳಸೀಧರ್ ಇತರರಿದ್ದರು.