

ಮಂಡ್ಯ: ನಿರಂತರವಾಗಿ ಕಾವೇರಿ ಹೋರಾಟ ನಡೆಯುತ್ತಿದ್ದರೂ ರಾಜ್ಯಸರ್ಕಾರ ಕನಿಷ್ಟ ಗಂಭೀರತೆಯನ್ನು ತೋರದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಸ್ವರೂಪ ಬದಲಿಸಲಾಗುತ್ತಿದೆ. ಅದರಂತೆ ಅ.20ರಿಂದ ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಒಂದೊಂದು ದಿನ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಳೆಯ ಅಭಾವದ ನಡುವೆಯೂ ಕಾವೇರಿ ಕಣಿವೆ ಜಲಾಶಯದಿಂದ ತ.ನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಆದರೂ ರಾಜ್ಯಸರ್ಕಾರ ಹೋರಾಟವನ್ನು ನಿರ್ಲಕ್ಷೃ ಮಾಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸಲು ಯೋಜನೆ ರೂಪಿಸಲಾಗಿದೆ. ಅಂತೆಯ ವೇಳಾಪಟ್ಟಿಯೂ ಸಿದ್ಧಗೊಂಡಿದೆ.
ಅದರಂತೆ ಪ್ರತಿದಿನ ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹಾಗೂ ವಿದ್ಯಾರ್ಥಿಗಳು ಹೋರಾಟಕ್ಕೆ ಧುಮುಕಲಿದ್ದಾರೆ. ಅ.20ರಂದು ಇಂಡುವಾಳು, ಸಿದ್ದಯ್ಯನಕೊಪ್ಪಲು, ಸುಂಡಹಳ್ಳಿ, ಕಿರಗಂದೂರು, ಮೊಳೆಕೊಪ್ಪಲು ಗ್ರಾಮದ ಜನರು, 21ರಂದು ಗೋಪಾಲಪುರ, ಎಚ್.ಕೋಡಿಹಳ್ಳಿ, ಕೋಡಿಹಳ್ಳಿ ಫಾರ್ಮ್‌ನ ರೈತರು ಮತ್ತು ಸರ್ಕಾರಿ ಪದವಿ ಕಾಲೇಜು ಕಲಾ ವಿಭಾಗದ ವಿದ್ಯಾರ್ಥಿಗಳು, 22ರಂದು ಶಿವಳ್ಳಿ, ಗೊರವಾಲೆ, ಮರಡಿಪುರ, ಗುನ್ನಾಯಕನಹಳ್ಳಿ, ನಗರಕೆರೆ ಗ್ರಾಪಂ ವ್ಯಾಪ್ತಿ ಹಾಗೂ ಹುಲಿಗೆರೆಪುರ, ಮಾಲಗಾರನಹಳ್ಳಿ, ಉಪ್ಪಾರದೊಡ್ಡಿ, ಸೊಂಪುರ, ವೈದ್ಯನಾಥಪುರ ರೈತರು, 23ರಂದು ರಾಜ್ಯ ರೈತ ಸಂಘ(ಮೂಲ ಸಂಘಟನೆ), 24 ರಂದು ಎಚ್.ಮಲ್ಲಿಗೆರೆ, ಸಂಪಹಳ್ಳಿ, ಶಂಭೂನಹಳ್ಳಿ, ಬೀರಗೌಡನಹಳ್ಳಿ, ಬಿ.ಹೊಸಹಳ್ಳಿ, 25ರಂದು ರೈತ, ಸ್ತ್ರೀಶಕ್ತಿ, ಕನ್ನಡಪರ ಹಾಗೂ ಸಂಜೀವಿನಿ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸರ್ಕಾರಿ ಪದವಿ ಕಾಲೇಜು ವಾಣಿಜ್ಯ ವಿಭಾಗ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಅಂತೆಯೇ 26ರಂದು ಕೀಲಾರ ಗ್ರಾಮಸ್ಥರು ಹಾಗೂ ಮಾಂಡವ್ಯ ಪದವಿ ಕಾಲೇಜು ವಿದ್ಯಾರ್ಥಿಗಳು, 27ರಂದು ಸಾತನೂರು, ಕೊಮ್ಮೇರಹಳ್ಳಿ, ಹೊನಗಾನಹಳ್ಳಿ ಗ್ರಾಮಸ್ಥರು ಹಾಗೂ ಮಹಿಳಾ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, 28ರಂದು ಸಂತಕಸಲಗೆರೆ, ಕಾರಸವಾಡಿ ಗ್ರಾಮಸ್ಥರು ಹಾಗೂ ಮಾಂಡವ್ಯ ಐಟಿಐ ಕಾಲೇಜು ವಿದ್ಯಾರ್ಥಿಗಳು, 29ರಂದು ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂಡ್ಯ, ಪಣಕನಹಳ್ಳಿ, ಕೋಣನಹಳ್ಳಿ, ತಂಡಸನಹಳ್ಳಿ, ಚಿನ್ನಗಿರಿದೊಡ್ಡಿ, ಮಹಾತ್ಮಗಾಂಧಿ ಬಡಾವಣೆ(ತಿಟ್ಟು), 30ರಂದು ತಗ್ಗಹಳ್ಳಿ, ಕಮ್ಮನಾಯಕನಹಳ್ಳಿ, ಕೋಲಕಾರನದೊಡ್ಡಿ, ಟಿ.ಮಲ್ಲಿಗೆರೆ ರೈತರು ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು(ಮಹಾವಿದ್ಯಾಲಯ) ವಿದ್ಯಾರ್ಥಿಗಳು, 31ರಂದು ಮಂಡ್ಯ ನಗರದ ವಾಯು ವಿಹಾರಿಗಳ ಬಳಗ ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ.