127ನೇ ದಿನಕ್ಕೆ ಕಾಲಿಟ್ಟ ಕಾವೇರಿ ಹೋರಾಟ: ರಾಜ್ಯಸರ್ಕಾರದ ವಿರುದ್ಧ ತೀವ್ರ ಆಕ್ರೋಶ

Cauvery protest entered 127th day mandya
Published on

ಮಂಡ್ಯ: ತಮಿಳುನಾಡು ಪರ ಆದೇಶ ನೀಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿದ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಮಂಗಳವಾರ 127ನೇ ದಿನ ಪೂರೈಸಿತು.

ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಕಳೆದ 127 ದಿನದಿಂದ ನಿರಂತರ ಧರಣಿ, ಉಪವಾಸ ಸತ್ಯಾಗ್ರಹ ಸೇರಿದಂತೆ ವಿಭಿನ್ನ ರೀತಿಯ ಚಳವಳಿಗಳು ನಡೆಯುತ್ತಿದೆ. ಆದಾಗ್ಯೂ ರಾಜ್ಯಸರ್ಕಾರ ಚಳವಳಿಯನ್ನು ಹಗುರವಾಗಿ ಪರಿಗಣಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನೀರಿನ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಾಡದೆ ನಮ್ಮಲ್ಲಿ ನೀರಿಲ್ಲ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಹೇಳದೆ ನೀರನ್ನು ಬಿಟ್ಟು ಬೆಳೆ ಇಲ್ಲದಂತೆ ಮಾಡಿ, ಕುಡಿಯಲು ನೀರಿಲ್ಲದಂತೆ ಮಾಡಿ ಸಂಕಷ್ಟಕ್ಕೆ ದೂಡಿದೆ. ಸಂಕಷ್ಟ ಇದ್ದರೂ ಕಟ್ಟು ಪದ್ಧತಿಯ ನೀರನ್ನು ಕಡಿತಗೊಳಿಸಿ ಬೆಂಗಳೂರಿಗೆ ಐದನೇ ಹಂತದ ಯೋಜನೆಗೆ ಎಂಬ ವರದಿಯನ್ನು ಒಪ್ಪಿರುವ ನಡೆಯನ್ನು ವಿರೋಧಿಸುತ್ತೇವೆ. ಯಾವ, ಯಾರ ಭಯವೂ ಇಲ್ಲದೆ ಸರ್ಕಾರ ಹುಡುಗಾಟಕೆ ಆಟ ಆಡುತ್ತಿದೆ. ಒಂದು ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಟೀಕಿಸಿದರು.

ಸರ್ಕಾರ ಎಂದರೆ 24 ಗಂಟೆಯೂ ಒಳಗಣ್ಣನ್ನು ಎಚ್ಚರವಾಗಿರಿಸಿಕೊಂಡು ನಾಡು ನುಡಿಯ ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡಿ ಹೆಜ್ಜೆ ಇಡಬೇಕು. ಚಳವಳಿಯನ್ನು ಹಗುರ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಶಾಂತಿ ಅಹಿಂಸೆಯ ಚಳವಳಿ ತೀವ್ರ ಆಕ್ರೋಶಗೊಳ್ಳುವ ಮುನ್ನ ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಾಗಿ ವರ್ತಿಸಿ. ಬೆಂಗಳೂರಿನ ಕುಡಿಯುವ ನೀರಿಗೆ ಬೇರೆ ರೀತಿಯ ಯೋಜನೆಗಳನ್ನು ರೂಪಿಸಿ ಬೆಳೆಗೆ ಮೀಸಲಿಟ್ಟ ನೀರನ್ನು ನೀಡುವ ಯೋಚನೆಯನ್ನು ಕೈ ಬಿಡಲಿ ಎಂದು ಆಗ್ರಹಿಸಿದರು.

ಧರಣಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ನಾರಾಯಣಸ್ವಾಮಿ, ಅರುಣಕುಮಾರ್, ಸ್ವಾಮಿ, ಸುಶೀಲಮ್ಮ, ವಸಂತಮ್ಮ, ತಾಯಮ್ಮ, ಶಿವಲಿಂಗಯ್ಯ, ದುಂಡುಲಿಂಗರಾಜು, ವೆಂಕಟಚಲಯ್ಯ, ಜಯರಾಂ, ಲಿಂಗರಾಜು, ಶಂಕರ್, ಬಸವರಾಜು, ನಾಗರಾಜು,ದ್ಯಾವೇಗೌಡ, ಕರಿಯಪ್ಪ, ಬೋರಲಿಂಗಣ್ಣ, ಚನ್ನೇಗೌಡ, ಜಯಸ್ವಾಮಿ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net