ತ.ನಾಡಿಗೆ ನೀರು ಹರಿಸಬೇಕೆಂಬ ಆದೇಶಕ್ಕೆ ಆಕ್ರೋಶ: ಕಾವೇರಿ ಹೋರಾಟಗಾರರಿಂದ ಹೆದ್ದಾರಿ ತಡೆ

Cauvery protest continues mandya
Published on

ಮಂಡ್ಯ: ತಮಿಳುನಾಡಿಗೆ ನೀರು ಹರಿಸಬೇಕೆಂದು ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 108 ಹಾಗೂ ಸರದಿ ಉಪವಾಸ ಸತ್ಯಾಗ್ರಹ 26ನೇ ದಿನ ಪೂರೈಸಿತು.

ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ರಾಂಪುರ ಪುಟ್ಟಸ್ವಾಮಿ, ಬೆಸಗರಹಳ್ಳಿ ಗ್ರಾಮದ ಅಬ್ದುಲ್ ವಾಜೀದ್, ರಾಜು, ಮುತ್ತುರಾಜ್, ಕುಮಾರ್ ಉಪವಾಸ ಸತ್ಯಾಗ್ರಹ ನಡೆಸಿದರು. ಅಂತೆಯೇ ತ.ನಾಡಿಗೆ ನೀರು ಹರಿಸುವಂತೆ ಆದೇಶಿಸುತ್ತಿರುವ ನಿರ್ಧಾರ ವಿರೋಧಿಸಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಪರಿಸ್ಥಿತಿ ಅವಲೋಕಿಸದೆ ನೀರು ಬಿಡುವ ಆದೇಶವನ್ನು ನಿರಂತರವಾಗಿ ಮಾಡುತ್ತಿರುವುದು ಏಕೆ ಹಾಗೂ ಇಂತಹ ಆದೇಶಗಳನ್ನು ಸರ್ಕಾರ ಏಕೆ ಪಾಲನೆ ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಜಲಾಶಯಗಳಲ್ಲಿ ನೀರಿಲ್ಲ. ಹೀಗಿರುವಾಗ ವಾಸ್ತವ ಪರಿಸ್ಥಿತಿ ನೋಡಿ ಬನ್ನಿ ಎಂದು ಸರ್ಕಾರ ಕೂಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರು ವಿಚಾರವಾಗಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷೃ ವಹಿಸಿದೆ. ಇಷ್ಟೊತ್ತಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಆದರೆ ಯಾವುದೇ ಕಾನೂನು ಪ್ರಕ್ರಿಯೆ ಮಾಡಿಲ್ಲ. ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿಲ್ಲ. ಇನ್ನಾದರೂ ಸರ್ವೋಚ್ಚ ನ್ಯಾಯಾಲಯಕ್ಕೆ ತುರ್ತಾಗಿ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಹಿತ ಕಾಪಾಡುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ. ಹೋರಾಟದ ಬಗ್ಗೆ ಲಘುವಾಗಿ ಕಾಣುವ ಮನೋಭಾವ ಹೊಂದಿವೆ. ಚಳವಳಿಯನ್ನ ಕಡೆಗಣಿಸಬೇಡಿ. ಏಕವ್ಯಕ್ತಿ ಹೋರಾಟದಿಂದ ಜಯ ಸಾಧಿಸಬಹುದು. ಕಾವೇರಿ ಹೋರಾಟಗಾರರಿಗೆ ನೈತಿಕತೆ ಇದೆ. ಯಾವುದೇ ವ್ಯಕ್ತಿ ಮತ್ತು ಪಕ್ಷದ ಹಂಗಿನಲ್ಲಿ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಮಿತಿಯ ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಮುದ್ದೇಗೌಡ, ಎಸ್.ನಾರಾಯಣ್, ಮಹಾಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net