121ನೇ ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ: ಮುಂದುವರೆದ ಕಾವೇರಿ ಹೋರಾಟ

Cauvery protest completes 121st day mandya
Published on

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಶಿಫಾರಸು ಮಾಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿ ನೀರು ಹರಿಸಿದ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬುಧವಾರ 121ನೇ ದಿನ ಪೂರೈಸಿತು.

ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, 1991 ರಿಂದ 2018 ರವರೆಗೆ ಆಡಳಿತ ಸರ್ಕಾರ ನಮಗೆ ನಿಗದಿಪಡಿಸಿರುವ 285 ಟಿಎಂಸಿ ನೀರನ್ನು 18 ಲಕ್ಷ ಎಕರೆಗೆ ಬಳಸಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಸರ್ಕಾರ ವಿಫಲವಾಗಿವೆ. ನಮ್ಮ ಪಾಲಿನ ನೀರನ್ನು ಸಮರ್ಪಕವಾಗಿ ಬಳಸದೇ 100 ಟಿಎಂಸಿ ನೀರು ಅನಾಯಾಸವಾಗಿ ತಮಿಳುನಾಡಿಗೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿ ಸಂಕಷ್ಟದಲ್ಲಿ ಯಾವ ರೀತಿ ನಾವು ಬಗೆಹರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲು ತೀರ್ಮಾನಿಸಿದ್ದೇವೆ. ನಾವು 121 ದಿನದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಅದರ ಬಗ್ಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷೃವನ್ನು ತೋರಿದೆ. ಅದಕ್ಕಾಗಿ ನಾವು ವಿವರವಾದಂತಹ ಮಾಹಿತಿಯನ್ನು ರಾಜ್ಯದ ಜನತೆಗೆ ಹೇಳಬೇಕೆಂದು ನಿರ್ಧರಿಸಲಾಗಿದೆ ಎಂದರು.

ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ರಾಜ್ಯಸರ್ಕಾರದ ನಿರ್ಲಕ್ಷೃ ಧೋರಣೆಯನ್ನು ಖಂಡಿಸುತ್ತೇವೆ. ಯಾವುದೇ ಸರ್ಕಾರ ಬಂದರೂ ಕೂಡ 121 ದಿನ ಚಳವಳಿ ನಡೆದರೂ ರೈತರ ಮೇಲೆ ಇಷ್ಟೊಂದು ಬೇಜವಾಬ್ದಾರಿತನ ತೋರಿಲ್ಲ. ರೈತರ ಸಮಸ್ಯೆ ಬಗೆಹರಿಸುವುದು ಬೇಡ ಎಂಬ ತೀರ್ಮಾನಕ್ಕೆ ಏನಾದರೂ ಬಂದಿದ್ದಾರಾ ಎಂಬುದು ಗೊತ್ತಾಗುತ್ತಿಲ್ಲ. ಬಹಳ ಅನ್ಯಾಯದ ವಿಚಾರ ಇದು. ಜತೆಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ದೇಶಕ್ಕೆ ಅನ್ನ ಕೊಡುವ ರೈತನ ಕಣ್ಣೀರು ಒರೆಸಲು ಇಷ್ಟು ವಿಳಂಬ ಮಾಡುತ್ತಿರುವುದು ಬಹಳ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್, ಮಹಾಂತಪ್ಪ, ಶಿವರತ್ನಮ್ಮ, ಹುರುಗಲವಾಡಿ ರಾಮಯ್ಯ, ಅರುಣಕುಮಾರ್, ಸುಜಾತಾ ಸಿದ್ದಯ್ಯ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net