ಮೂರನೇ ದಿನ ಪೂರೈಸಿದ ಕಾವೇರಿ ಹೋರಾಟ: ಹಿರಿಯ ರಾಜಕಾರಣಿಗಳ ಬೆಂಬಲ

1 (1)
Published on

ಮಂಡ್ಯ: ತ.ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ ಮೂರನೇ ದಿನ ಪೂರೈಸಿತು.

ಹೋರಾಟ ಬೆಂಬಲಿಸಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭಾಗವಹಿಸಿದರು. ಅಂತೆಯೇ ರಾಜ್ಯಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ಮಂಡ್ಯ ಜನರ ಅನ್ನದ ಋಣ ನನ್ನ ಮೇಲಿದೆ. ನಿಮ್ಮ ಪ್ರೀತಿ, ಅಭಿಮಾನ, ಅನ್ನದ ಋಣಕ್ಕಾಗಿ ನಾನು ಸದಾ ನಿಮ್ಮೊಂದಿಗಿರುತ್ತೇನೆ. ಸೆ.6ರ ಬಳಿಕ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ. ನಿಮ್ಮ ಹೋರಾಟಕ್ಕೆ ನಾನು ಸದಾ ಜತೆಯಾಗಿರುತ್ತೇನೆ ಎಂದರು.

ನನ್ನ ಸಿನಿಮಾಗಳನ್ನು ಮಂಡ್ಯದ ಜನರು ನೋಡಿ ಅನ್ನದ ಋಣವನ್ನು ಹೊರಿಸಿದ್ದಾರೆ. ಆ ಋಣ ತೀರಿಸುವುದು ನನ್ನ ಜವಾಬ್ದಾರಿ. ಇದಕ್ಕಾಗಿ ನಿಮ್ಮ ಹೋರಾಟಕ್ಕೆ ಭಾಗಿಯಾಗುತ್ತೇವೆ. ನೀವು ಕರೆದಲ್ಲಿಗೆ ಬರುತ್ತೇನೆ. ನಾನು ಆಮ್ ಆದ್ಮಿ ಪಕ್ಷದಲ್ಲಿರಬಹುದು. ಆದರೆ, ರಾಜ್ಯದ ನೆಲ, ಜಲ, ಗಣಿ ಮತ್ತು ಭಾಷೆ ವಿಚಾರದಲ್ಲಿ ನಾವೆಲ್ಲರೂ ನಿಮ್ಮೊಂದಿಗೆ ಇರುತ್ತೇವೆ. ತ.ನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವವರೆವಿಗೂ, ಭರವಸೆ ಕೊಡುವವರೆವಿಗೂ ನಾವು ನಮ್ಮ ಹಕ್ಕೊತ್ತಾಯ ಮಾಡುವುದು ಅನಿವಾರ್ಯ. ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಬೇಕು. ಪ್ರಸ್ತುತ ರಾಜ್ಯದ ಜನಪ್ರತಿನಿಧಿಗಳ ಜವಾಬ್ದಾರಿ ಸಾಕಷ್ಟಿದೆ. ಶಾಸಕ, ಸಂಸದರು ಯಾವುದೇ ಪಕ್ಷದವರಾಗಿರಲಿ ಇಂತಹ ಸಂಕಷ್ಟದ ಪರಿಸ್ಥಿತಿ ಬಂದಾಗ ಎಲ್ಲರೂ ತಾವಾಗಿಯೇ ಕೈಜೋಡಿಬೇಕು. ಅದರೆ, ನಮ್ಮೊಂದಿಗೆ ಬನ್ನಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸರಿಯಾದ ಅಂಕಿಅಂಶದೊಂದಿಗೆ ಕರ್ನಾಟಕ ವಾದ ಮಾಡಿಲ್ಲ. ಅದರಿಂದಲೇ ಇಂದು ಈ ಪರಿಸ್ಥಿತಿ ಬಂದಿದೆ. ಇಲ್ಲಿನ ಜನರಿಗೇ ನೀರಿಲ್ಲದಿದ್ದರೂ ತ.ನಾಡಿಗೆ ನೀರು ಹರಿಸುತ್ತಿರುವುದು ಎಷ್ಟು ಸರಿ?. ತ.ನಾಡಿನ ಸರ್ಕಾರ ಅಲ್ಲಿನ ಜನರ ಬಗ್ಗೆ ಇಚ್ಛಾಸಕ್ತಿ ಹೊಂದಿದೆ. ಆದರೆ ಆ ಬದ್ಧತೆ ನಮ್ಮ ರಾಜ್ಯಸರ್ಕಾರಕ್ಕೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net