72ನೇ ದಿನ ಪೂರೈಸಿದ ಕಾವೇರಿ ಹೋರಾಟ: ರಾಜ್ಯಸರ್ಕಾರದ ವಿರುದ್ಧ ಆಕ್ರೋಶ

Cauvery Protest completed its 72nd day mandya
Published on

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಮತ್ತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 72ನೇ ದಿನ ಪೂರೈಸಿತು.

ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಸಮಿತಿಯ ಮುಖಂಡರು ಭಾಗಿಯಾದರು. ನೀರು ಬಿಡಲು ಮತ್ತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾವೇರಿ ಹೋರಾಟಗಾರರು, ನ.19ರಂದು ನಡೆಯುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ರಾಜ್ಯದ ಪರ ಆದೇಶ ಬರಲಿ ಎಂದು ಆಶಿಸಿದರು.

ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಂಕಷ್ಟ ಕಾಲದಲ್ಲಿ ಮತ್ತೆ ಮತ್ತೆ ನೆರೆ ರಾಜ್ಯಕ್ಕೆ ನೀರು ಬಿಡುವಂತೆ ಆದೇಶ ಹೊರ ಬೀಳುತ್ತಿರುವುದು ಸರ್ಕಾರದ ವೈಫಲ್ಯತೆಯನ್ನು ತೋರ್ಪಡಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಬೇಕಾದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮುಂದುವರೆಸಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಆಕ್ರೋಶಿಸಿದರು.

ಮುಖಂಡ ನಾರಾಯಣ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯಕ್ಕೊಳಗಾಗಿರುವ ಕರ್ನಾಟಕಕ್ಕೆ ಮುಂದಿನ ಪ್ರಾಧಿಕಾರದ ಸಭೆಯಲ್ಲಿ ನ್ಯಾಯ ದೊರಕಲಿದೆ ಎಂಬ ಆಶಾ ಭಾವನೆ ಇದೆ. ಅಷ್ಟರ ಮಟ್ಟಿಗೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನ್ಯಾಯ ದೊರೆತರೆ ಮುಂದಿನ ಸಂಕಷ್ಟದ ಹೊರೆ ತಪ್ಪಲಿದೆ. ಇಲ್ಲವಾದರೆ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ಮುಂದುವರೆದಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟ ಕಾಲದಲ್ಲಿಯೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬೆಳೆಗೆ ನೀರಿಲ್ಲ ಜನ ಜಾನುವಾರುಗಳಿಗೆ ಕುಡಿಯಲು ನೀರು ಉಳಿಯಲಿ ಎಂದು ಹೋರಾಟ ಮಾಡುತ್ತಿದ್ದೇವೆ. ಆದರೆ ಪ್ರಾಧಿಕಾರ ನೀರು ಹರಿಸುವಂತೆ ಮತ್ತೆ ಮತ್ತೆ ಆದೇಶ ಹೊರಡಿಸುತ್ತಿರುವುದು ಅವೈಜ್ಞಾನಿಕ. ಈ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಚಳವಳಿ ಮುಂದುವರೆಯಲಿದೆ. ಕರ್ನಾಟಕದ ಹಿತ ಕಡೆಗಣಿಸಿದರೆ ಕಾವೇರಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಧರಣಿಯಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಮಲ್ಲನಾಯಕನ ಕಟ್ಟೆ ಬೋರೇಗೌಡ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ನಿವೃತ್ತ ಇಂಜಿನಿಯರಿಂಗ್ ಸಂಘದ ದೇವರಾಜು, ಫಯಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net