

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯಸರ್ಕಾರದ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಬಲಿಸಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಗೋಪಾಲಪುರ ಗ್ರಾಪಂ ವ್ಯಾಪ್ತಿಯ ಗೋಪಾಲಪುರ, ಎಚ್.ಕೋಡಿಹಳ್ಳಿ, ಕೋಡಿಹಳ್ಳಿ ಫಾರ್ಮ್‌ನ ರೈತರು ಮೆರವಣಿಗೆ ಮೂಲಕ ಆಗಮಿಸಿದರು. ಅಂತೆಯೇ ಸರ್ಕಾರಿ ಮಹಾವಿದ್ಯಾಲಯದ ಪದವಿ ಕಾಲೇಜು ಕಲಾ ವಿಭಾಗದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾವೇರಿ ಹೋರಾಟ ಬೆಂಬಲಿಸಿ ಮೆರವಣಿಗೆ ನಡೆಸಿದರು. ಕಾಲೇಜು ಆವರಣದಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಧರಣಿ ಬೆಂಬಲಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷೃತೆ ತೋರಿರುವುದು ಖಂಡನೀಯ. ಬೆಳೆ ಹಾಕದಂತೆ ನಮ್ಮ ರೈತರಿಗೆ ನೋಟಿಸ್ ಕೊಡುವ ರಾಜ್ಯಸರ್ಕಾರ, ತಮಿಳುನಾಡಿನವರು 3ನೇ ಬೆಳೆಗೆ ನೀರು ಕೇಳಿದ್ದಕ್ಕೆ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲವೇ, ಕಣ್ಣು ಕಾಣಿಸುತ್ತಿಲ್ಲವೇ?. ಸುಮ್ಮನೆ ಕುಳಿತು ಹೋರಾಟ ಮಾಡುತ್ತಿದ್ದಾರೆಂದು ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಇನ್ನಾದರೂ ರಾಜ್ಯದ ರೈತರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಜಯರಾಂ, ಪುಟ್ಟಮ್ಮ, ರಾಮಕೃಷ್ಣ, ಭಾನುಪ್ರಕಾಶ್, ಕೆ.ಬೋರಯ್ಯ, ವಿದ್ಯಾರ್ಥಿನಿ ಪ್ರಿಯಾ ಇತರರಿದ್ದರು.