

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಭಾನುವಾರ ರಾಜಸ್ಥಾನ ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಸಮುದಾಯದವರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಸಾಗಿ ಸರ್ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿದರು. ಅಂತೆಯೇ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ಹಾಗೂ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕೆಆರ್ಎಸ್ ಡ್ಯಾಂನಲ್ಲಿ ನೀರು ಇದ್ದಾಗ ಯಾವುದೇ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ ಮಳೆ ಕೊರತೆಯಿಂದ ನೀರಿನ ಅಭಾವ ಎದುರಾದಾಗ ಸಂಕಷ್ಟ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಸಹ ನೆರೆರಾಜ್ಯಕ್ಕೆ ಹರಿಸುವುದು ಸರಿಯಲ್ಲ. ಸರ್ಕಾರ ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ನೀರು ಇದ್ದರೆ ಕೊಡೋಣ. ಆದರೆ ಬಲವಂತವಾಗಿ ಕಸಿಯುವುದು ಎಷ್ಟು ಸರಿ. ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ನೀರು ಪಡೆಯುತ್ತಿದ್ದಾರೆ. ಈ ರೀತಿ ನಿರಂತರ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಕನ್ನಡ ನಾಡು ಮತ್ತು ರೈತರ ಹಿತ ಕಾಪಾಡಲು ಆಳುವ ಸರ್ಕಾರ ಮುಂದಾಗಬೇಕು. ಕಾವೇರಿಕೊಳ್ಳದ ಜಲಾಶಯಗಳ ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಅನಂತರ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜಸ್ಥಾನ ಸಮಾಜದ ಸದಸ್ಯ ಫುಟರ್ ಮಲ್ ಜೈನ್, ಮುಖಂಡರಾದ ಬೀರ್ಸಿಂಗ್, ವಿಮಾರಾಮ್ ಇತರರಿದ್ದರು.