ಮುಸ್ಲಿಂ ಸಮುದಾಯ, ಕಲಾವಿದರಿಂದ ಪ್ರತಿಭಟನೆ: ಅನಿರ್ದಿಷ್ಟಾವಧಿ ಕಾವೇರಿ ಹೋರಾಟಕ್ಕೆ ಬೆಂಬಲ

Cauvery protest by Muslim community, artists mandya
Published on

ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ಪದೇ ಪದೆ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಡೊಳ್ಳು ಕುಣಿತ ಕಲಾವಿದರ ತಂಡ ಹಾಗೂ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರು ನಿರಂತರ ಧರಣಿಯಲ್ಲಿ ಕಾರಸವಾಡಿ ಗ್ರಾಮದ ವಿನಾಯಕ ಯುವಕರ ಕಲಾ ಬಳಗದವರು ಭಾಗಿಯಾಗಿ ಡೊಳ್ಳು ಕುಣಿತ ಪ್ರದರ್ಶಿಸಿ ಹೋರಾಟ ಬೆಂಬಲಿಸಿದರು. ಧರಣಿ ಸ್ಥಳದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಡೊಳ್ಳು ಕುಣಿತ ನಡೆಸಿ ಹೋರಾಟಕ್ಕೆ ಸಾಂಸ್ಕೃತಿಕ ಮೆರಗು ನೀಡಿದರು. ಕಲಾತಂಡದ ಮುಖ್ಯಸ್ಥ ಕೆ.ಪಿ.ಸ್ವಾಮಿ ನೇತೃತ್ವ ವಹಿಸಿದ್ದರು.

ಅಂತೆಯೇ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮುಗಿಸಿ ಕಾವೇರಿ ಹೋರಾಟಕ್ಕೆ ಬಂದರು. ವಿವಿಧ ಮಸೀದಿಗಳ ಮುಖ್ಯಸ್ಥರ ನೇತೃತ್ವದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿ ಘೋಷಣೆ ಕೂಗುವ ಮೂಲಕ ಹೋರಾಟ ಬೆಂಬಲಿಸಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿದ ಮುಸ್ಲಿಂರು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಹೌಸಿಂಗ್ ಬೋರ್ಡ್ ಮಸೀದಿ ಮುಖ್ಯಸ್ಥ ಮಹಮದ್ ಹುಸೇನ್ ಮಾತನಾಡಿ, ನಾವು ಹುಟ್ಟಿ ಬೆಳೆದದ್ದು ಮಂಡ್ಯದ ನೆಲದಲ್ಲೇ. ದಿನನಿತ್ಯದ ಬದುಕಿಗೆ ಕಾವೇರಿ ನೀರು ಆಶ್ರಯಿಸಿದ್ದೇವೆ. ನಮ್ಮಗಳ ಬದುಕು ರೈತರನ್ನು ಅವಲಂಬಿಸಿದೆ. ಕೃಷಿಗೆ ಪೂರಕ ವ್ಯವಹಾರ ನಮ್ಮದು. ಕಾವೇರಿ ನೀರು ಇಲ್ಲದೆ ನಮ್ಮಗಳ ಬದುಕು ಧಕ್ಕೆ ತರಲಿದೆ. ಆದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು. ಕಾವೇರಿ ವಿಚಾರದಲ್ಲಿ ನಿರಂತರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸರ್ದಾರ್, ಫಯಾಜ್ ಅಹಮದ್, ದಾವೂದ್, ನಜೀಬ್, ಫಯಾಜ್, ಸಾದತ್ ಅಲಿ, ಯಾಸಿನ್ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net