

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರಂತರವಾಗಿ ಅವೈಜ್ಞಾನಿಕ ಆದೇಶ ನೀಡುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬುಧವಾರ ನಗರದಲ್ಲಿ ಮೊತ್ತಹಳ್ಳಿ, ಲಾಳನಕೆರೆ ಗ್ರಾಮಸ್ಥರು ಹಾಗೂ ಜಿಲ್ಲಾ ಕಲಾವಿದರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸುವುದರ ಜತೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿದರು. ಮಾತ್ರವಲ್ಲದೆ ಮಾನವ ಸರಪಳಿ ನಿರ್ಮಿಸಿ ಹಾಗೂ ರಸ್ತೆಯಲ್ಲಿ ಉರುಳುಸೇವೆ ಮಾಡಿ ಆಕ್ರೋಶ ಹೊರಹಾಕಿದರು.
ನಿವೃತ್ತ ಸಹಾಯಕ ಇಂಜಿನಿಯರ್ ಕೆಂಪೇಗೌಡ ಮಾತನಾಡಿ, ಕಳೆದ ವಾರ ಕಾವೇರಿ ಚಳವಳಿ ಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಹೇಳಲೇ ಇಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರು ಸಿಎಂ ಅವರನ್ನು ತರಾತುರಿಯಲ್ಲಿ ಕರೆದುಕೊಂಡು ಹೋದರು. ಇದನ್ನು ಗಮನಿಸಿದರೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಕಾಂಗ್ರೆಸ್ ಹೈಕಮಾಂಡ್ ಓಲೈಕೆಗಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಕನಸು ಹೊರತು ರೈತರ ಕಾಪಾಡುವ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬೇರೆಯವರು ಜಲ ಸಂಪನ್ಮೂಲ ಸಚಿವರಾಗಿದ್ದರೆ, ಸ್ವಲ್ಪ ಪ್ರಮಾಣದಲ್ಲಿ ನ್ಯಾಯ ಸಿಗುತ್ತಿತ್ತೇನೋ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷದ ಪ್ರಾಬಲ್ಯದಿಂದ ಕೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸಿ ದೇಶದಲ್ಲಿ ಹೆಚ್ಚಿನ ಅನುದಾನ ಪಡೆಯುವುದರ ಜತೆಗೆ ಕಾವೇರಿ ವಿಚಾರದಲ್ಲಿ ಹೆಚ್ಚಿನ ಅನುಕೂಲ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಎಂ.ಡಿ.ಸತೀಶ್, ಹೆಬ್ಬೆರಳು ಸಿದ್ದೇಗೌಡ, ನಂಜುಂಡೇಗೌಡ, ಎಂ.ಕೃಷ್ಣ, ಕೆ.ಸುರೇಶ್, ಪಟೇಲ್ ಸಿದ್ದೇಗೌಡ, ಸಿದ್ದೇಶ್, ಸತೀಶ್, ಕಲಾವಿದರ ಒಕ್ಕೂಟದ ಹುರುಗಲವಾಡಿ ರಾಮಯ್ಯ, ಅಶ್ವಿನಿ, ಕೀಲಾರ ಕೃಷ್ಣೇಗೌಡ, ದೇವರಾಜ್ ಕೊಪ್ಪ, ಉಮಾಶಂಕರ್, ಶೇಖರ್, ಪುಟ್ಟಮಂಚಮ್ಮ, ಮಂಜುಳಾ ಇತರರಿದ್ದರು.