ತ.ನಾಡಿಗೆ ನೀರು ಹರಿಸಿದ್ದಕ್ಕೆ ಆಕ್ರೋಶ: ಮಂಡ್ಯದಲ್ಲಿ ಯೂತ್ ಗ್ರೂಪ್‌ನಿಂದ ಆತಂಕದ ನಡಿಗೆ

2
Published on

ಮಂಡ್ಯ: ಸಂಕಷ್ಟ ಪರಿಸ್ಥಿತಿಯಲ್ಲೂ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯ ಯೂತ್ ಗ್ರೂಪ್ ಬುಧವಾರ ಸಂಜೆ ನಡೆಸಿದ ಆತಂಕದ ನಡಿಗೆ ನೀರಿಗೆ ಉಂಟಾಗಿರುವ ಅಭಾವವನ್ನು ಪ್ರತಿಬಿಂಬಿಸಿತು.

ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯ ಜಾಥಾ ನಡೆಸಿದರು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ ಎಂಬ ಮುನ್ನೆಚ್ಚರಿಕೆಯಾಗಿ ಜನರಿಗೆ ನೀರು ವಿತರಣೆ ಮಾಡುವ ಮೂಲಕ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ನೀರಿಗೆ ಸಂಕಷ್ಟ ಎದುರಾಗುವ ಸಮಯದಲ್ಲೆಲ್ಲ ತಮಿಳುನಾಡು ಕ್ಯಾತೆ ತೆಗೆಯುವುದು ಹೊಸದೇನಲ್ಲ. ತಮಿಳುನಾಡಿನ ಈ ನಡವಳಿಕೆಯನ್ನು ಕಂಡೂ ರಾಜ್ಯಸರ್ಕಾರ ಮೊದಲೇ ಎಚ್ಚೆತ್ತುಕೊಳ್ಳದಿರುವುದು ನಮ್ಮ ದೌರ್ಬಲ್ಯವಾಗಿದೆ. ನೀರಿನ ಅಭಾವ ಕುರಿತು ತಮಿಳುನಾಡು ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಕದ ತಟ್ಟುವ ಮುನ್ನವೇ ನಮ್ಮ ಸರ್ಕಾರ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಅದರಲ್ಲಿ ಮಾಡಿರುವ ಲೋಪದಿಂದ ನಮ್ಮ ರೈತರು, ಜನರ ಹಿತ ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.

ಶತಮಾನಗಳಿಂದಲೂ ಕಾವೇರಿ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿದ್ದಾರೆಯೇ ವಿನಃ ಅದನ್ನು ಇತ್ಯರ್ಥಪಡಿಸುವುದಕ್ಕೆ ಯಾವುದೇ ರಾಜಕೀಯ ಪಕ್ಷದವರೂ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಪರಿಣಾಮ ಕರ್ನಾಟಕಕ್ಕೆ ಕಾವೇರಿ ನೀರಿನ ವಿಷಯದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ರಾಜಕೀಯ ಪಕ್ಷಗಳೂ ಸಮಸ್ಯೆ ವಿರುದ್ಧ ಒಗ್ಗಟ್ಟು ಪ್ರದರ್ಶಿಸದಿರುವುದು ತಮಿಳುನಾಡಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿಕೊಟ್ಟಿದೆ ಎಂದು ಹೇಳಿದರು.

ಡಾ.ಯಾಶಿಕಾ, ಪ್ರವೀಣ್, ದರ್ಶನ್, ನವೀನ್, ವಿನಯ್, ಸೀನಪ್ಪ, ಪ್ರಶಾಂತ್, ಮಂಜು, ಯೋಗಿ ಗುಪ್ತ, ನರೇಂದ್ರ, ಹರೀಶ್‌ಕುಮಾರ್, ನಂಜುಂಡ, ವಿನೋದ್, ನಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net