

ಮಂಡ್ಯ: ತಮಿಳುನಾಡಿಗೆ ನೀರು ಹರಿಸಬೇಕೆನ್ನುವ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಆದೇಶ ಖಂಡಿಸಿ ಗುರುವಾರ ನಗರದಲ್ಲಿ ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರಂತರ ಧರಣಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೋರಾಟ ಬೆಂಬಲಿಸಿದರು. ಅಂತೆಯೇ ನಿರ್ವಹಣಾ ಸಮಿತಿ, ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೋರಾಟಗಾರರ ಜತೆಗೂಡಿದ ವಿದ್ಯಾರ್ಥಿಗಳು ಬೆಂಗಳೂರು-ಮೈಸೂರು ಹೆದ್ದಾರಿಗೆ ಇಳಿದು ಸಂಚಾರ ತಡೆ ನಡೆಸಿದರು.
ವಿದ್ಯಾರ್ಥಿನಿ ಮೇಘನಾ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಾದ ಒಪ್ಪಂದ ಸ್ವಾತಂತ್ರೃದ ನಂತರವೂ ಮುಂದುವರೆದಿದೆ. ಇದುವರೆಗೆ ನಮ್ಮನ್ನ ಹಲವು ಸರ್ಕಾರಗಳು ಆಳ್ವಿಕೆ ಮಾಡಿವೆ. ಆದರೆ ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು ಹಲವು ಭರವಸೆಗಳನ್ನು ನೀಡಿ ರೈತರ ಹಿತ ಕಾಪಾಡುವುದಾಗಿ ಹೇಳಿದ್ದಾರೆ. ಆದರೆ ಅವರು ವಿಧಾನಸೌಧ ತಲುಪುತ್ತಿದ್ದಂತೆ ಆಡಳಿತದಲ್ಲಿ ತಲ್ಲಿನರಾಗಿ ಇದನ್ನು ಮರೆತು ಬಿಡುತ್ತಾರೆ. ಚುನಾಯಿತ ಜನಪ್ರತಿನಿಧಿಗಳು ಕಾವೇರಿ ವಿಚಾರವಾಗಿ ದನಿ ಎತ್ತಬೇಕಾಗಿದೆ ಎಂದರು.
ನೀರು ಪ್ರಕೃತಿದತ್ತ ಕೊಡುಗೆ. ಇದ್ದಾಗ ತಾನೇ ತಾನಾಗಿ ಹರಿದು ಹೋಗಿದೆ. ಆದರೆ ತಮಿಳುನಾಡು ಸಂಕಷ್ಟಕಾಲದಲ್ಲಿ ನೀರಿಗಾಗಿ ಹಠಮಾರಿ ಧೋರಣೆ ತಾಳುತ್ತಿರುವುದು ಸರಿಯಲ್ಲ. ಮಂಡ್ಯ ಸಂಸದೆ ಕಾವೇರಿ ನೀರಿನ ವಿಚಾರವನ್ನ ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲೆಯನ್ನು ಮತ ಪಡೆದು ಚುನಾಯಿತರಾಗಲು, ಮಗನ ಬೀಗರ ಊಟ ಮಾಡಲು ಬಳಕೆ ಮಾಡಿಕೊಂಡಂತಿದೆ. ಇನ್ನು ಮುಂದಾದರೂ ರೈತರ ಸಮಸ್ಯೆಯನ್ನು ಆಲಿಸಲು ಮುಂದಾಗಬೇಕು. ಅವರನ್ನು ಪ್ರಶ್ನಿಸುವುದು ಮತದಾರರ ಹಕ್ಕು. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ ಆರು ತಿಂಗಳು ಜನರ ಜತೆ ಬೆರೆತು ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ಇಲ್ಲದಿದ್ದರೆ 2024ರ ಚುನಾವಣೆಯಲ್ಲಿ ಬದಲಾವಣೆ ಸಮಯ ಬರಬಹುದು. ಆ ಸಂದರ್ಭದಲ್ಲಿ ಮತದಾರರು ಬದಲಾವಣೆ ನಿರ್ಧಾರ ಮಾಡಲಿದ್ದಾರೆ ಎಂದು ತಿರುಗೇಟು ನೀಡಿದರು.
ಪ್ರತಿಭಟನೆಯಲ್ಲಿ ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲ ಭವಾನಿ ಶಂಕರ್, ಉಪನ್ಯಾಸಕರಾದ ಚೈತ್ರಾ, ಚಂದ್ರಕುಮಾರ್, ವಿದ್ಯಾರ್ಥಿ ಕಿಶನ್ ಇತರರಿದ್ದರು.