ಮಂಡ್ಯದಲ್ಲಿ ವಕೀಲರಿಂದ ಪ್ರತಿಭಟನೆ: ಕಾವೇರಿ ಹೋರಾಟಕ್ಕೆ ಬೆಂಬಲ

2
Published on

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ವಕೀಲರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಕೀಲರ ಸಂಘದ ಆವರಣದಿಂದ ಮೆರವಣಿಗೆ ಹೊರಟ ವಕೀಲರು, ಜಯಚಾಮರಾಜೇಂದ್ರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟಿಸಿ ಬಳಿಕ ಸರ್‌ಎಂವಿ ಮೆರವಣಿಗೆ ನಡೆಸಿ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಭಾಗಿಯಾದರು. ಅಂತೆಯೇ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೂಡಲೇ ನೀರು ಸ್ಥಗಿತ ಮಾಡುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿ, ರೈತರ ಹಿತ ಕಾಪಾಡದೇ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲದಂತಾಗಿದೆ. ಜಲಾಶಯಗಳನ್ನ ಬರಿದು ಮಾಡಿದ್ದರೂ ನೀರು ಹರಿಸುತ್ತಿದೆ. ಮುಂದಿನ ದಿನಗಳಲ್ಲಿ ಜನತೆಗೆ ಕುಡಿಯಲು ನೀರು ಸಿಗದಂತಹ ಸಂಕಷ್ಟ ತಂದೊಡ್ಡಲಿದೆ. ಕಾವೇರಿ ವಿಚಾರದಲ್ಲಿ ಜನಪ್ರತಿನಿಧಿಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಅಂತೆಯೇ ರೈತರ ಪರ ಹೋರಾಟ ಮಾಡಿ ಎಂದರು.

ಸುಪ್ರೀಂ ಕೋರ್ಟ್ ಸೆ.21ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಹರಿಸಲು ನೀರು ಎಲ್ಲಿದೆ. ಆದ್ದರಿಂದ ಜಲಾಶಯಗಳಿಂದ ಬಿಡುಗಡೆ ಮಾಡಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಕಾವೇರಿ ನದಿ ನೀರಿನ ವಿಚಾರದಲ್ಲಿ ವಾದ ಮಾಡುತ್ತಿರುವ ನ್ಯಾಯವಾದಿಗಳಿಗೆ ಸಮರ್ಪಕ ಮಾಹಿತಿ ಒದಗಿಸಲು ಸರ್ಕಾರ ಮುಂದಾಗಬೇಕು. ಸರಿಯಾದ ಮಾಹಿತಿ ಇಲ್ಲದೆ ವಾದ ಮಾಡಲು ಹೇಗೆ ಸಾಧ್ಯ?. ಅಂತೆಯೇ ಕಾವೇರಿ ಕಣಿವೆ ಪ್ರದೇಶದ ವಾಸ್ತವ ಪರಿಸ್ಥಿತಿ ಬಗ್ಗೆ ನ್ಯಾಯವಾದಿಗಳಿಗೆ ಮಾಹಿತಿ ಒದಗಿಸಿ ಕೊಡಿ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಲ್.ಮರಿಸ್ವಾಮಿ, ಕಾರ್ಯದರ್ಶಿ ಸಿದ್ದರಾಜು, ಜಂಟಿ ಕಾರ್ಯದರ್ಶಿ ಮಹದೇವ್, ಖಜಾಂಚಿ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net