ಕಾವೇರಿ ಹೋರಾಟ ಬೆಂಬಲಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರಿಂದ ಪ್ರತಿಭಟನಾ ಮೆರವಣಿಗೆ: ರಾಜ್ಯಸರ್ಕಾರದ ವಿರುದ್ಧ ಆಕ್ರೋಶ

Cauvery protest by KSRTC retired employees mandya
Published on

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಿವೃತ್ತ ನೌಕರರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಬೆಂಗಳೂರು-ಮೈಸೂರು ಮೆರವಣಿಗೆ ಹೊರಟು ರೈತ ಹಿತರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ತೆರಳಿದರು. ಅಂತೆಯೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಸಂಘದ ಮುಖಂಡ ವೆಂಕಟರಾಮು ಮಾತನಾಡಿ, ಆಳುವ ಸರ್ಕಾರಗಳು ಹಣಕಾಸು ವಿಚಾರವಾಗಿ ಶ್ವೇತ ಪತ್ರ ಹೊರಡಿಸುತ್ತವೆ. ಆದರೆ ಜನರಿಗೆ ಅತ್ಯಮೂಲ್ಯವಾದ ನೀರಿನ ವಿಚಾರದಲ್ಲಿ ನಿರ್ಲಕ್ಷೃ ವಹಿಸುತ್ತಿವೆ. ಜಲಾಶಯಗಳಲ್ಲಿ ಇರುವ ನೀರಿನಲ್ಲಿ ಲಭ್ಯತೆ, ಜನ ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಜಮೀನಿನಲ್ಲಿ ಇರುವ ಬೆಳೆ, ಮತ್ತೆ ಎಷ್ಟು ಪ್ರದೇಶದಲ್ಲಿ ಬೆಳೆ ಹಾಕಬೇಕಾಗಿದೆ. ಕೆರೆ ಕಟ್ಟೆಗಳಿಗೆ ಎಷ್ಟು ನೀರು ಬೇಕೆಂಬ ಲೆಕ್ಕಾಚಾರದ ಶ್ವೇತ ಪತ್ರ ಹೊರಡಿಸುವುದಿಲ್ಲ. ಇದನ್ನು ಗಮನಿಸಿದರೆ ಆಳುವ ವರ್ಗಕ್ಕೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರ್ಪಡಿಸುತ್ತದೆ. ತಮಗೆ ಬೇಕಾದಾಗ ಕಾನೂನು ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಆದರೆ ಕಾವೇರಿ ನೀರಿನ ವಿಚಾರದಲ್ಲಿ ಕಾನೂನು ತಿದ್ದುಪಡಿ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಚಿಕ್ಕದೇವಯ್ಯ, ಗೌರವಾಧ್ಯಕ್ಷ ಮುನಿಯಪ್ಪ, ಕೆ.ಶಿವಣ್ಣ, ನರಸೇಗೌಡ, ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net