

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ನಗರದಲ್ಲಿ ಶುಕ್ರವಾರ ತಳಗವಾದಿ ಗ್ರಾಮಸ್ಥರು ಮತ್ತು ರಾಷ್ಟ್ರಮಟ್ಟದ ಜಾನಪದ ಕಲಾವಿದರು ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ತಮಟೆ ಸದ್ದು ಹಾಗೂ ಪೂಜಾ ಕುಣಿತದೊಂದಿಗೆ ಕಲಾವಿದರು ಕಹಳೆ ಮೊಳಗಿಸಿ ಹೋರಾಟದ ಕಿಚ್ಚು ಹೆಚ್ಚಿಸಿದರು. ಅಂತೆಯೇ ತಳಗವಾದಿ ಗ್ರಾಮಸ್ಥರು ಹೋರಾಟ ಬೆಂಬಲಿಸಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಾನಪದ ಕಲಾವಿದೆ ಉಮಾ ಮಹೇಶ್ವರಿ ದೇವರ ವಿಗ್ರಹ ಹೊತ್ತು ಕುಣಿಯುತ್ತ ಸಾಗಿದರು. ಆಳುವ ಸರ್ಕಾರಗಳು ರೈತರ ಹಿತ ಕಾಪಾಡಲು ಮುಂದಾಗಬೇಕು. ಗ್ರಾಮೀಣ ಜನರ ಬದುಕಿನ ಜತೆ ಚೆಲ್ಲಾಟವಾಡಬಾರದು. ಜೀವನದಿ ಕಾವೇರಿ ಆಶ್ರಯಿಸಿ ಲಕ್ಷಾಂತರ ಕುಟುಂಬ ಬದುಕು ಕಟ್ಟಿಕೊಂಡಿವೆ. ಜಲಾಶಯಗಳನ್ನು ಬರಿದು ಮಾಡಿದರೆ ಬೆಳೆ ಇಲ್ಲದೆ ಬದುಕು ಅತಂತ್ರವಾಗಿ ರೈತರ ಸಾಲದ ಸುಳಿಗೆ ಸಿಲುಕಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಪೂಜಾ ಕುಣಿತ ಕಲಾವಿದೆ ಸವಿತಾ ಚಿರುಕುನ್ನಯ್ಯ, ಕುಮಾರ್, ಸಿದ್ದರಾಜು, ರವಿ, ಕಾಳಯ್ಯ, ಶೇಖರ್ ಇತರರಿದ್ದರು.