ತ.ನಾಡು ನೀರು ಹರಿಸುತ್ತಿರುವುದಕ್ಕೆ ಖಂಡನೆ: ಹೆದ್ದಾರಿ ಸಂಚಾರ ತಡೆದು ರೈತರ ಪ್ರತಿಭಟನೆ

1
Published on

ಮಂಡ್ಯ: ತಮಿಳುನಾಡಿಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಶುಕ್ರವಾರ ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ಸಂಚಾರ ತಡೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಯಿತು.

ಕಾವೇರಿ ಕೊಳ್ಳದ ರೈತರ ಹಿತ ಬದಿಗೊತ್ತಿ ತ.ನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತ ದ್ರೋಹಿಯಾಗಿದೆ. ಇನ್ನು ಕೇಂದ್ರ ಸರ್ಕಾರ ಸಂಕಷ್ಟಕಾಲದಲ್ಲಿ ಮಧ್ಯಪ್ರವೇಶಿಸಬೇಕಾಗಿತ್ತು. ಆದರೆ ಪ್ರತಿ ಬಾರಿಯೂ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಆಗಸ್ಟ್‌ನಲ್ಲಿ 13 ಟಿಎಂಸಿ ನೀರು ಹರಿಸಿರುವ ರಾಜ್ಯಸರ್ಕಾರ, ಇದೀಗ ಮತ್ತೆ ನೀರು ಬಿಟ್ಟಿದೆ. ಪರಿಣಾಮ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ನೂರು ಅಡಿಗೆ ಕುಸಿದಿದೆ. ಇಲ್ಲಿನ ಬೆಳೆದು ನಿಂತಿರುವ ಬೆಳೆಗೆ ನೀರು ಕೊಡುತ್ತಿಲ್ಲ. ಹೊಸ ಬೆಳೆ ನಾಟಿ ಮಾಡಲು ಸಾಧ್ಯವಾಗಿಲ್ಲ. ಇದೇ ರೀತಿ ನೀರು ಹರಿಸುತ್ತಿದ್ದರೆ ಕುಡಿಯಲು ನೀರು ಸಹ ಇಲ್ಲದಂತಾಗುತ್ತದೆ, ಈ ತಕ್ಷಣ ನೀರು ನಿಲ್ಲಿಸುವಂತೆ ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮತ್ತಷ್ಟು ದಿನ ಮುಂದೂಡುವುದು. ತಮಿಳುನಾಡಿಗೆ ಹೆಚ್ಚಿನ ನೀರು ಹರಿಯಲಿ ಎಂಬ ಹುನ್ನಾರವಾಗಿದೆ. ರಾಜ್ಯದ ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯಲು ನೀರಾವರಿ ತಜ್ಞರ ತಂಡ ಕಳುಹಿಸಿಕೊಡಬೇಕು. ಜತೆಗೆ ಜಲಾಶಯದಲ್ಲಿರುವ ನೀರಿನ ಲಭ್ಯತೆ ಬಗ್ಗೆ ತಿಳಿದುಕೊಳ್ಳಲಿ, ಅದನ್ನು ಬಿಟ್ಟು ನೀರು ಹರಿಸಲು ಪದೇ ಪದೇ ಆದೇಶ ಮಾಡುವುದು ಮಲತಾಯಿ ಧೋರಣೆ ಅಲ್ಲವೇ?. ರಾಜ್ಯ ಸರ್ಕಾರ ಯಾವುದಕ್ಕೂ ಮಣಿಯದೆ ರೈತರ ಹಿತ ಕಾಪಾಡಲು ಮುಂದಾಗಬೇಕು. ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮರಿ ಚೆನ್ನಪ್ಪ, ವಿಜಯ್‌ಕುಮಾರ್, ಬಿದರಕೋಟೆ ರಮೇಶ್, ಇಂಡುವಾಳು ಸಿದ್ದೇಗೌಡ, ಅಣ್ಣೂರು ಮಹೇಂದ್ರ, ರಾಮಕೃಷ್ಣೇಗೌಡ, ಜವರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net