

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದ್ದರೂ ರಾಜ್ಯದ ಹಿತ ಕಾಪಾಡಲು ಮುಂದಾಗದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ರೈತ ಸಂಘ (ಮೂಲಸಂಘಟನೆ) ಮೈಸೂರು ಜಿಲ್ಲೆ ಬನ್ನೂರು ಘಟಕದ ಮುಖಂಡರು ಬೆಂಬಲ ಸೂಚಿಸಿದರು.
ಸರ್‌ಎಂವಿ ಪ್ರತಿಮೆ ಎದುರು 11ನೇ ದಿನದ ಉಪವಾಸದಲ್ಲಿ ಮುಖಂಡರಾದ ಬನ್ನೂರಿನ ನಾರಾಯಣ್, ಜಯರಾಮೇಗೌಡ, ರಾಜು, ಪಾರ್ಥ, ಎಂ.ವಿ.ಕೃಷ್ಣಪ್ಪ, ಸಿ.ಹಳ್ಳಿ ರವಿ, ರಂಗಸ್ವಾಮಿ ಮೇಗಲ ಕೊಪ್ಪಲು, ತಮ್ಮಯ್ಯ ಯಾಚೇನಹಳ್ಳಿ, ಶಿವರಾಮು ಬಿ.ಬೆಟ್ಟಹಳ್ಳಿ ಪಾಲ್ಗೊಂಡಿದ್ದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಚಳವಳಿ 92ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಮಿಳುನಾಡು ಸರ್ಕಾರ ಹಠಮಾರಿ ಧೋರಣೆ ಅನುಸರಿಸಿ ನೀರು ಪಡೆಯುತ್ತಿದೆ. ರಾಜ್ಯ ಸರ್ಕಾರ ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶದಂತೆ ನೀರು ಹರಿಸಿ ಆದೇಶ ಪಾಲನೆ ಮಾಡಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿರುವುದು ಸರಿಯಲ್ಲ. ರಾಜ್ಯಸಭೆಯಲ್ಲಿ ತ.ನಾಡಿನ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಜಲ ಶಕ್ತಿ ಇಲಾಖೆ ಸಚಿವರು ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶದಂತೆ ನೀರು ಹರಿಸಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ನೀರು ಹರಿದಿರುವ ಪ್ರಮಾಣದ ವರದಿ ದಿನಕ್ಕೆರಡು ಬಾರಿ ಸರ್ಕಾರಗಳಿಗೆ ತಲುಪುತ್ತದೆ. ಆದರೂ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಬೇಕಾದ ಅಗತ್ಯ ಏನಿತ್ತು? ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಪ್ರತಿ ಬಾರಿ ಎಡವುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್ ಎಸ್ ನಾರಾಯಣ್, ದಸಂಸ ಎಂ.ವಿ.ಕೃಷ್ಣ ಇತರರಿದ್ದರು.