

ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸಬಾರದು ಎಂದು ಆಗ್ರಹಿಸಿ ಕಾವೇರಿ ಕ್ರಿಯಾ ಸಮಿತಿಯಿಂದ ನಡೆಯುತ್ತಿರುವ ಹೋರಾಟ ಮುಂದುವರಿದಿದೆ.
ಪುರಭವನ ಮುಂಭಾಗದ ದೊಡ್ಡ ಗಡಿಯಾರದ ಬಳಿ ನಡೆಸುತ್ತಿರುವ ಪ್ರತಿಭಟನೆ 7ನೇ ದಿನ ಪೂರೈಸಿದೆ. ಇದಕ್ಕೆ ಬೆಂಬಲ ಸೂಚಿಸಿದ ಜಿಲ್ಲಾ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಕಾರ್ಯಕರ್ತರು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಘೋಷಣೆ ಕೂಗಿದರು.
ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದೆ. ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಖಂಡನೀಯ. ಮೊದಲಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕಿಡಿಕಾರಿದರು.
ತಮಿಳುನಾಡಿನ ಒತ್ತಾಯಕ್ಕೆ ಮಣಿದು 3ನೇ ಬೆಳೆಗೆ ನೀರು ಬಿಡಲಾಗುತ್ತಿದೆ. ಕಾವೇರಿ ಕಣಿವೆಯ ವಸ್ತುಸ್ಥಿತಿ ತಿಳಿದಿದ್ದರೂ ನಮಗೆ ನೀರು ಬಿಡಿ ಎಂದು ತಮಿಳುನಾಡು ಹಠ ಮಾಡುತ್ತಿರುವುದು ಸರಿಯಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರದೆ ನಿರ್ಲಕ್ಷ್ಯ ವಹಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
ನ್ಯಾಯ ಮಂಡಳಿ ರದ್ದು ಮಾಡಿ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು. ತಮಿಳುನಾಡಿಗೆ ವಸ್ತುಸ್ಥಿತಿ ತಿಳಿಸಿ ಹೆಚ್ಚು ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವ ಶಾಶ್ವತ ಒಪ್ಪಂದ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ಎಂ.ಮೋಹನಕುಮಾರ್‌ಗೌಡ, ಜಯಪ್ರಕಾಶ್, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಸುರೇಶ್ ಗೋಲ್ಡ್ ಹಲವರು ಪಾಲ್ಗೊಂಡಿದ್ದರು.