ಕೊಳೆತ ಮೀನು, ಕೋಳಿ ತ್ಯಾಜ್ಯದಿಂದ ಕಾವೇರಿ ಕಲುಷಿತ

16.npk--5
ನಾಪೋಕ್ಲು ಸಮೀಪದ ಕೊಟ್ಟಮುಡಿ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿಯಲ್ಲಿರುವ ಕೊಳೆತ ಮೀನು, ಕೋಳಿ ತ್ಯಾಜ್ಯ.
Published on

ನಾಪೋಕ್ಲು: ಸಮೀಪದ ಕೊಟ್ಟಮುಡಿ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿಯ ಒಡಲಲ್ಲಿ ಕೊಳೆತ ಮೀನಿನ ರಾಶಿ ಹಾಗೂ ಕೋಳಿ ತ್ಯಾಜ್ಯ ಕಂಡುಬಂದಿದ್ದು, ನದಿ ನೀರು ಮಲಿನಗೊಂಡಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಪ್ರಜ್ಞೆ ಇಲ್ಲದವರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುಡಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಗುರುವಾರ ಬೆಳಗ್ಗೆ ಶಬರಿಮಲೆಯಿಂದ ಹಿಂದಿರುಗಿದ ನಾಪೋಕ್ಲು ವ್ಯಾಪ್ತಿಯ ಸುಮಾರು 25 ಅಯ್ಯಪ್ಪ ಮಾಲಾಧಾರಿ ಭಕ್ತರು ಕಾವೇರಿ ಪುಣ್ಯಸ್ನಾನಕ್ಕೆ ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಶಬರಿಮಲೆಗೆ ತೆರಳಿದ ಭಕ್ತರು ಪ್ರತಿ ವರ್ಷದಂತೆ ಕಾವೇರಿ ನದಿಯಲ್ಲಿ ಶ್ರದ್ಧಾಭಕ್ತಿಯಿಂದ ಪುಣ್ಯಸ್ನಾನ ಮಾಡಿ ಮನೆಗೆ ತೆರಳುವುದು ವಾಡಿಕೆ. ಈ ವರ್ಷ ನೀರು ಕಲುಷಿತಗೊಂಡಿರುವುದರಿಂದ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ನದಿ ನೀರು ಮಲಿನಗೊಂಡಿರುವ ಕಾರಣ ಪುಣ್ಯಸ್ನಾನ ಮಾಡದೆ ಭಕ್ತರು ಹಿಂತಿರುಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಇದೇ ನೀರನ್ನು ಬಳಸುತ್ತಾರೆ. ಸ್ಥಳಿಯ ಪಟ್ಟಣಕ್ಕೆ ಇಲ್ಲಿಂದಲೇ ಕಾವೇರಿ ನೀರು ಸರಬರಾಜು ಆಗುತ್ತಿರುವುದರಿಂದ ಗ್ರಾಮ ಪಂಚಾಯಿತಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಯ್ಯಪ್ಪ ಮಾಲಾಧಾರಿ, ವಿಶ್ವ ಹಿಂದು ಪರಿಷತ್ತಿನ ಮಡಿಕೇರಿ ತಾಲೂಕು ಸಂಚಾಲಕ ರಾಧಾಕೃಷ್ಣ ರೈ ಎಚ್ಚರಿಸಿದ್ದಾರೆ.

ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕೇಶ್ ಪ್ರತಿಕ್ರಿಯಿಸಿ ದುಷ್ಕೃತ್ಯ ನಡೆಸಿದ ಬಗ್ಗೆ ದೂರು ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net