ಕೊಡಗಿನ ಜೀವನದಿ ಕಾವೇರಿ ಮಲೀನ

Cauvery is polluted in the life of Kodagu
Published on

ಮಡಿಕೇರಿ:

ಜೀವನದಿ ಕಾವೇರಿ ತನ್ನ ಉಗಮಸ್ಥಾನ ಕೊಡಗು ಬಿಟ್ಟು ಹೊರಡುವಾಗಲೇ ಮಲೀನಗೊಂಡಿರುತ್ತಾಳೆ ಎನ್ನುವುದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನದಿಂದ ಸಾಬೀತಾಗಿದೆ. ಕಾವೇರಿ ನದಿಯ ಹರಿವು ಆರಂಭವಾಗವ ಭಾಗಮಂಡಲದಿಂದ ಜಿಲ್ಲೆಯ ಗಡಿಭಾಗ ಶಿರಂಗಾಲದ ತನಕ ಒಟ್ಟು ೨೩ ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ಕಾವೇರಿ ನದಿ ದಂಡೆಯಲ್ಲಿದೆ. ಇಷ್ಟೂ ಸ್ಥಳೀಯ ಆಡಳಿತಗಳ ವ್ಯಾಪ್ತಿಯಲ್ಲಿ ಉತ್ಪಾದನೆ ಆಗುವ ತ್ಯಾಜ್ಯ ನೀರು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ನದಿ ಸೇರುತ್ತಿದೆ. ಇದನ್ನು ಹೊರತುಪಡಿಸಿ ಮನೆ, ಹೊಟೇಲ್, ಕೈಗಾರಿಕೆಗಳ ತ್ಯಾಜ್ಯ ನೀರು ನೇರವಾಗಿ ನದಿಗೆ ಬಿಡುವುದು, ಕಾಫಿ ಫಲ್ಪಿಂಗ್ ನೀರು ಹರಿಸುವುದು, ನದಿ ದಂಡೆಗಳ ಒತ್ತುವರಿ, ನದಿ ದಂಡೆಯಲ್ಲಿ ಹೋಂಸ್ಟೇ, ರೆಸಾರ್ಟ್, ಹೊಟೇಲ್‌ಗಳ ಕಾರ್ಯಾಚರಣೆ, ಅವೈಜ್ಞಾನಿಕ ಮರಳು ಗಣಿಗಾರಿಕೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಒತ್ತಡ.. ಹೀಗೆ ಹಲವು ಕಾರಣಗಳಿಂದ ಕೊಡಗಿನಲ್ಲೇ ಕಾವೇರಿ ನದಿಯ ನೀರು ನೇರವಾಗಿ ಕುಡಿಯಲು ಆಗದ ಹಂತ ತಲುಪಿದೆ.

ನದಿ ಮಾಲಿನ್ಯಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ ಭವಿಷ್ಯ ತುಂಬಾ ಅಪಾಯಕಾರಿ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದು ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ರಾಜ್ಯ ಸರ್ಕಾರ, ಜೀವನದಿ ಕಾವೇರಿ ನೀರು ಮಲಿನಗೊಳ್ಳುತ್ತಿರುವುದರ ಬಗ್ಗೆ ಅಧ್ಯಯನಕ್ಕೆ ತುರ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನಿರಂಜನ್ ಅಧ್ಯಕ್ಷತೆಯಲ್ಲಿ ೯ ಮಂದಿ ಹಿರಿಯ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಆಗಲಿದೆ ಮತ್ತು ಕಾವೇರಿ ನದಿಯ ಸದ್ಯದ ಪರಿಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸರ್ಕಾರ ನದಿ ಸ್ವಚ್ಛತೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಅದಕ್ಕೂ ಮಿಗಿಲಾಗಿ ಸಾರ್ವಜನಿಕರೇ ಎಚ್ವೆತ್ತುಕೊಳ್ಳಬೇಕು. ತಮ್ಮ ಆಸುಪಾಸಿನ ನದಿ ಪರಿಸರದ ರಕ್ಷಣೆಗೆ ಮುಂಗಾಗಬೇಕು. ತಾವೂ ತ್ಯಾಜ್ಯಗಳನ್ನು ಎಸೆಯಬಾರದು. ಬೇರೆಯವರೂ ಎಸೆಯದ ಹಾಗೆ ನಿಗಾವಹಿಸಬೇಕು. ಆಗ ಮಾತ್ರ ನದಿ ಪಾತ್ರಗಳು ನೈರ್ಮಲ್ಯದಿಂದ ಕೂಡಿರುತ್ತದೆ.
ಮಾಂಗೇರ ಕ್ವೀನ್, ಸಮಾಜ ಸೇವಕಿ, ಗೋಣಿಕೊಪ್ಪ

ಕಾವೇರಿ ಮೂಲಸ್ಥಾನಗಳಲ್ಲಿ ಮಾಲಿನವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರ ಅಧ್ಯಯನದ ನಂತರ ಯೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು.
ಪಿ.ಆರ್. ಸುನಿಲ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸುಂಟಿಕೊಪ್ಪ

ಸರ್ಕಾರದ ಈ ಕಾರ್ಯ ಸ್ವಾಗತಾರ್ಹ. ನದಿ ಮಲೀನವಾದ ನಂತರ ಅದರ ಸ್ವಚ್ಚತೆಗೆ ಯೋಜನೆ, ವಿವಿಧ ಕಾರ್ಯಕ್ರಮ ರೂಪಿಸುವುದಕ್ಕಿಂತ ನದಿ ಮೂಲ ಮಲೀನಗೊಳಿಸದಂತೆ ಒಂದ?್ಟು ನಿಯಮ ರೂಪಿಸುವುದು ಒಳಿತು. ತಾಂತ್ರಿಕ ಸಮಿತಿ ಉತ್ತಮವಾದ ಮಾರ್ಗೋಪಾಯವನ್ನು ನೀಡಿ ಅದನ್ನು ಎಲ್ಲರೂ ಪಾಲಿಸಿ ಕಾವೇರಿಯನ್ನು ಮಲೀನಮುಕ್ತ ಮಾಡೋಣ.
ವೇದಾತ್ಮ ಬಿ.ವಿ., ವಿರಾಜಪೇಟೆ ನಿವಾಸಿ

ನದಿ ಸ್ವಚ್ಛತೆಗೆ ಸರ್ಕಾರ ಮುಂದಾಗಿದೆ. ಮಾಲಿನ್ಯ ತಡೆಗೆ ಮಾರ್ಗೋಪಾಯಗಳ ಬಗ್ಗೆ ಸಲಹೆ ನೀಡಲು ತಾಂತ್ರಿಕ ಸಮಿತಿಯೊಂದನ್ನು ರಚಿಸಿದೆ. ತಾಂತ್ರಿಕ ಸಮಿತಿಯಲ್ಲಿ ಈ ಭಾಗದ ರೈತರನ್ನು ಹೆಚ್ಚಾಗಿ ಸೇರಿಸಬೇಕು. ನದಿ ನೀರು ಹೆಚ್ಚಾಗಿ ಬಳಕೆಯಾಗುವುದು ರೈತರಿಗೆ. ಯಾವ ಸಮಯದಲ್ಲಿ ಯಾವ ನದಿ, ಕೆರೆಗಳನ್ನು ಸ್ವಚ್ಛ್ಚಗೊಳಿಸಿದರೆ ಅನುಕೂಲವಾಗುತ್ತದೆ ಎಂಬ ಮಾಹಿತಿ ಹೆಚ್ಚಾಗಿ ರೈತರಿಗೆ ಗೊತ್ತಿರುತ್ತದೆ.
ಧರ್ಮಯ್ಯ, ರೈತ, ಹೊನ್ನೆಕೊಪ್ಪಲು, ಮುಳ್ಳೂರು

ಕಾವೇರಿ ನದಿ ಸ್ವಚ್ಛತೆಗೆ ಸರ್ಕಾರ ರಚಿಸುವ ಸಮಿತಿ ನೈಜ ಪರಿಸರ ಪ್ರೇಮಿಗಳದ್ದಾಗಿರಬೇಕು. ಈ ಕಾರ್ಯಕ್ರಮ ಫಲ ಕೊಡಬೇಕಾದರೆ ಆ ಸಮಿತಿ ಪಾರದರ್ಶಕ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ನದಿ ದಡದಲ್ಲಿನ ಭೂಮಿಯಲ್ಲಿ ಕೃಷಿ ಇರಬೇಕು. ನದಿಯಲ್ಲಿ ಜಲಚರಗಳಿಗೆ ಪೂರಕ ವಾತಾವರಣ ಇರಬೇಕು. ನದಿಯನ್ನು ಅಕ್ರಮ ಚಟುವಟಿಕೆಗಳಿಂದ ದೂರ ಇಡಬೇಕು.
ನಾಪಂಡ ಗಣೇಶ್, ನಿರ್ದೇಶಕ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ

ಕೊಡಗಿನಲ್ಲಿ ಕಾವೇರಿ ನದಿ ಮಲಿನ ಆಗುತ್ತಿರುವುದು ಸತ್ಯ. ಪಟ್ಟಣ ಪ್ರದೇಶದ ಚರಂಡಿ ನೀರು ನೇರವಾಗಿ ಸಣ್ಣ ನದಿ ತೊರೆಗಳ ಮೂಲಕ ಕಾವೇರಿ ನದಿ ಸೇರುತ್ತಿದೆ. ಕೆಲ ಕಡೆ ಶೌಚಗೃಹದ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತರೆ, ಕಾವೇರಿ ಮಲಿನ ಆಗುವುದನ್ನು ತಡೆಯಲು ಸಾಧ್ಯ.
ಕೆ.ಎಸ್. ಹರೀಶ್ ಕುಮಾರ್, ಕಾಫಿ ಬೆಳೆಗಾರ, ಕುಮಾರಳ್ಳಿ ಗ್ರಾಮ

ಜನರು ಹಳೇ ಬಟ್ಟೆ ಹಾಕುವುದು ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ತಂದು ನದಿಗೆ ಎಸೆಯುವುದನ್ನು ಬಿಟ್ಟಿಲ್ಲ. ವಾಣಿಜ್ಯ ಕಟ್ಟಡಗಳು ಮತ್ತು ಇತರ ವ್ಯವಸ್ಥೆಗಳಿಂದ ನದಿಗೆ ಮಾಲಿನ್ಯಯುಕ್ತ ನೀರು ಹರಿಯುತ್ತದೆ. ಪ್ರವಾಸೋದ್ಯಮದ ಅವೈಜ್ಞಾನಿಕ ಬೆಳವಣಿಗೆ ತ್ಯಾಜ್ಯ ಮತ್ತು ಕಸವನ್ನು ಕಾವೇರಿ ನದಿಗೆ ಹರಿಯುವಂತೆ ಮಾಡಿದೆ. ನದಿಯನ್ನು ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ
ಬಾವ ಮಾಲ್ದಾರೆ, ಮುಖ್ಯಸ್ಥ, ಜನಪರ ಸಂಘ, ಮಾಲ್ದಾರೆ

ಇಂದು ಗೋಣಿಕೊಪ್ಪದ ಕೀರು ಹೊಳೆ ಉಪಯೋಗಕ್ಕೆ ಬಾರದ ರೀತಿ ಕಲುಷಿತಗೊಂಡಿದೆ. ಸ್ವಚ್ಛಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದರೂ ಪ್ರಯೋಜನವಾಗಿಲ್ಲ. ನೀರು ಶುದ್ಧವಾಗಿದ್ದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರೆಯುತ್ತದೆ. ಇನ್ನಾದರೂ ನದಿಯನ್ನು ಕಸಮುಕ್ತಗೊಳಸಿದರೆ ಒಳ್ಳೆಯದು. ಕಾವೇರಿ ನದಿಗೆ ಸ್ವಚ್ಛತೆಯ ಭಾಗ್ಯ ಈಗಲಾದರೂ ಕೂಡಿ ಬರಲಿ.
ಸುರೇಶ್ ಎನ್.ಜಿ., ವಿದ್ಯುತ್ ಗುತ್ತಿಗೆದಾರ, ಗೋಣಿಕೊಪ್ಪ

ಕಾವೇರಿ ನದಿ ಕೇವಲ ಒಂದು ದಶಕದಲ್ಲಿ ಹೇಗೆಲ್ಲಾ ಬದಲಾಗಿದೆ ಎನ್ನುವುದನ್ನು ನಾವು ಹತ್ತಿರದಿಂದ ಗಮನಿಸಿದ್ದೇವೆ. ನದಿ ಮಾಲಿನ್ಯ ತಪ್ಪಿಸದಿದ್ದರೆ ಕಾವೇರಿ ಮುಂದೊಂದು ದಿನ ಅಸ್ತಿತ್ವನ್ನೇ ಕಳೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಸರ್ಕಾರ ಸಕರಾತ್ಮಕ ಹೆಜ್ಜೆ ಇಟ್ಟಿದೆ. ಆದಷ್ಟು ಬೇಗ ತಜ್ಞರ ಸಮಿತಿ ವರದಿ ಕೊಡಲಿ. ನದಿ ರಕ್ಷಣೆಗೆ ಈ ವರದಿ ಪೂರಕವಾಗಿರಲಿ.
ಎ.ಪಿ. ಡಾಟಿ, ಮಾಜಿ ಸದಸ್ಯೆ, ಗ್ರಾ.ಪಂ. ಗುಡ್ಡೆಹೊಸೂರು

ಜೀವನದಿ ಕಾವೇರಿ ನೀರು ಮಲಿನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ತುರ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆಗಳ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನಿರಂಜನ್ ಅಧ್ಯಕ್ಷತೆಯಲ್ಲಿ ೯ ಮಂದಿ ಹಿರಿಯ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಈ ಸಮಿತಿ ಕೊಡುವ ವರದಿ ಆಧರಿಸಿ ಕಾವೇರಿ ನದಿ ರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net