ಕಾವೇರಿ ಹೋರಾಟಕ್ಕೆ ದಾಖಲೆಯ ಇತಿಹಾಸ: ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹೇಳಿಕೆ

Cauvery dispute Seminar mandya
Published on

ಮಂಡ್ಯ: ಜಗತ್ತಿನ ಯಾವ ಭಾಗದಲ್ಲಿಯೂ ಕಾವೇರಿ ಚಳವಳಿಯಂತಹ ಹೋರಾಟ ನಡೆದಿಲ್ಲ. ಅಷ್ಟರ ಮಟ್ಟಿಗೆ ಕಾವೇರಿ ನದಿ ನೀರಿನ ವಿಚಾರವಾಗಿ ಸಮಾಜದ ಎಲ್ಲ ಸ್ತರದ ಜನತೆ ಹೋರಾಟ ಮಾಡಿ ಇತಿಹಾಸದ ಪುಟದಲ್ಲಿ ದಾಖಲು ಮಾಡಿದ್ದಾರೆ ಎಂದು ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಶ್ಲಾಘಿಸಿದರು.

ನಗರದ ಗಾಂಧಿಭವನದಲ್ಲಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾವೇರಿ ನದಿ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹೋರಾಟಕ್ಕೆ ಎಂದಿಗೂ ಸಾವಿಲ್ಲ. ಚಳವಳಿ ಮಾಡಿದರೆ ಏನು ಪ್ರಯೋಜನ, ನೀರು ಹೋಗುತ್ತಲೇ ಇದೆ ಎಂದೇಳಿ ಮೌನಕ್ಕೆ ಮೊರೆ ಹೋಗುವ ಪ್ರತೀತಿ ಸರಿಯಲ್ಲ. ನ್ಯಾಯಕ್ಕಾಗಿ ದನಿ ಎತ್ತದಿದ್ದರೆ ಬದುಕಿದ್ದು ಸತ್ತಂತೆ. ಕಾವೇರಿ ಹೋರಾಟದಲ್ಲಿ ಎಲ್ಲರನ್ನು ಸಮಾನವಾಗಿ ಸ್ವೀಕರಿಸುವ ವ್ಯಕ್ತಿತ್ವ ಇರುವವರು ಮುಂಚೂಣಿಯಲ್ಲಿದ್ದರೆ ಒಳ್ಳೆಯದು. ಅಂತವರು ಇಲ್ಲದಿದ್ದರೂ ಸಹ ಹೋರಾಟ ನಿರಂತರವಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕಾವೇರಿ ನದಿ ಬದುಕಿನ ವಿಚಾರ ಇದರಲ್ಲಿ ನಂಬಿಕೆ ಇರಬೇಕೇ ಹೊರತು ಸಂಕುಚಿತ ಮನೋಭಾವ ಸರಿಯಲ್ಲ. ಪರ್ಯಾಯ ಎಂಬ ಆಲೋಚನೆ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಬದಲಿಗೆ ಎಲ್ಲರೂ ಮಾಡುತ್ತಿರುವುದು ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಎಂಬ ಪ್ರಜ್ಞೆ ಇರಬೇಕು. ಆದರೆ ನಿರಂತರ ಹೋರಾಟ ಮುಖ್ಯವಾಗಿರುವುದರಿಂದ ಎಲ್ಲ ಶಕ್ತಿ ಒಗ್ಗೂಡಿ ಮುನ್ನಡೆಯಬೇಕಾಗಿದೆ. ಕೆಲವರು ಮತ ಬ್ಯಾಂಕ್‌ಗಾಗಿ, ಮತ್ತೆ ಕೆಲವರು ಸ್ಥಾನಮಾನಕ್ಕಾಗಿ ಹೋರಾಟದಲ್ಲಿ ಭಾಗಿಯಾಗಬಹುದು. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಇದುವರೆಗಿನ ಕಾವೇರಿ ಹೋರಾಟವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಆಯಾ ಕಾಲಘಟ್ಟದಲ್ಲಿ ಆಡಳಿತದಲ್ಲಿದ್ದ ಪಕ್ಷ ಮತ್ತು ಪ್ರತಿ ಪಕ್ಷ ಯಾವ ರೀತಿ ನಡೆದುಕೊಂಡಿವೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ನಾಯಕರ ವರ್ತನೆ, ವಿರೋಧ ಪಕ್ಷದಲ್ಲಿದ್ದಾಗ ಅವರ ವರ್ತನೆ ಎಲ್ಲವನ್ನು ಜನತೆ ನೋಡಿದ್ದಾರೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ತಮಿಳುನಾಡು ನಿರಂತರ ಕುತಂತ್ರ ಮತ್ತು ವಾಮ ಮಾರ್ಗ ಅನುಸರಿಸಿದೆ. ಎರಡು ರಾಜ್ಯಗಳ ನಡುವಿನ ಜಲ ವಿವಾದ ಕಾನೂನು ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದರೂ ಸಹ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಪಕ್ಷವನ್ನ ಬೆಂಬಲಿಸಿ ಕಾವೇರಿ ನ್ಯಾಯಾಧೀಕರಣ ರಚನೆಗಾಗಿ ದೊಡ್ಡ ಲಾಭಿ ಮಾಡಿತು. ಅಲ್ಲಿಂದಲೇ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಶುರುವಾಯಿತು. ಆದರೆ ನಮ್ಮ ರಾಜಕಾರಣಿಗಳು ರಾಜ್ಯದ ಹಿತ ಕಾಪಾಡಲು ಮುಂದಾಗಲಿಲ್ಲ. ಕಾವೇರಿ ವಿಚಾರದಲ್ಲಿ ಯಾವುದೇ ಆದೇಶವನ್ನು ತಿರಸ್ಕರಿಸುವ ಗಟ್ಟಿ ದನಿ ಎತ್ತಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ವಾಸ್ತವ ಪರಿಸ್ಥಿತಿ ಅವಲೋಕಿಸದೆ ಆದೇಶ ಮಾಡುತ್ತಿರುವುದು ಸರಿಯಲ್ಲ. ಇಂತಹ ಅವೈಜ್ಞಾನಿಕ ಆದೇಶ ಮಾಡುತ್ತಿರುವಂತಹ ಪ್ರಾಧಿಕಾರ ರದ್ದಾಗಬೇಕಿದೆ. ಕಾವೇರಿಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕನಿಷ್ಟ ಮಟ್ಟಕ್ಕೆ ಕುಸಿತ ಕಂಡಿದ್ದರೂ ಸಹ ನೀರು ಬಿಡಿ ಎನ್ನುವುದು ಸರಿಯಲ್ಲ. ಅವರೇ ಬಂದು ವಾಸ್ತವ ಪರಿಸ್ಥಿತಿ ಅರಿಯಲಿ. ಕಾವೇರಿ ಬದುಕಿನ ಪ್ರಶ್ನೆಯಾಗಿದ್ದು, ಎಲ್ಲರೂ ಸಹ ಧ್ವನಿ ಎತ್ತಬೇಕು. ತೆರೆದ ಮನಸ್ಸಿನ ವಿಶಾಲ ಮನೋಭಾವದಿಂದ ಜಿಲ್ಲೆಯಲ್ಲಿ ಒಮ್ಮತದ ದನಿ ಹೊರಹೊಮ್ಮಲಿ ಎಂದು ಸಲಹೆ ನೀಡಿದರು.

ಭಾರತೀಯ ಕಿಸಾಸ್ ಸಂಘದ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಉದ್ಘಾಟಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಮಿತಿ ಅಧ್ಯಕ್ಷ ಅಂದಾನಿ ಸೋಮನಹಳ್ಳಿ, ಬೇಕ್ರಿ ರಮೇಶ್, ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್, ಜಿಲ್ಲಾಧ್ಯಕ್ಷ ಶಂಕರೇಗೌಡ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಸಿದ್ದರಾಜುಗೌಡ, ಪುಟ್ಟಮ್ಮ, ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net