

ಮೈಸೂರು: ರಾಜ್ಯ ಸರ್ಕಾರಕ್ಕೆ ರಾಜ್ಯದ ಜನರ ಹಿತಕ್ಕಿಂತ ಡಿಎಂಕೆ ಜತೆಗಿನ ಮೈತ್ರಿ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಹರಿಸುತ್ತಿರುವ ಪರಿಣಾಮ ಮೈಸೂರು ಹಾಗೂ ಬೆಂಗಳೂರಿನ ನಿವಾಸಿಗಳು ಮುಂದೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾ ಗಲಿದೆ ಎಂದರು.
ತಮಿಳುನಾಡಿನಲ್ಲಿ 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕುರುವೈ ಬೆಳೆಗೆ ಕಾವೇರಿ ನೀರು ಬಳಸಬೇಕು. ಆದರೆ, ಪ್ರಸ್ತುತ ಅವರು 4 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಬೆಳೆದಿದ್ದಾರೆ. ಇದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿಯುತ್ತಿರುವ ನೀರನ್ನು ತಡೆಯಬೇಕು. ಕಾಂಗ್ರೆಸ್‌ಗೆ ರಾಜ್ಯದ ಜನರು ಸ್ಪಷ್ಟ ಬಹುಮತ ನೀಡಿರುವ ಹಿನ್ನೆಲೆಯಲ್ಲಿ ನಮ್ಮನ್ನು 5 ವರ್ಷ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂಬ ಭರವಸೆಯಲ್ಲಿ ಕಾಂಗ್ರೆಸ್‌ನವರು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಇದು ರಾಜ್ಯಕ್ಕೆ ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಜ್ಞಾನ ಇದ್ದವರು ಕಾವೇರಿ ವಿಚಾರವಾಗಿ ಪ್ರಧಾನಿ ಬಳಿ ಸರ್ವಪಕ್ಷದ ನಿಯೋಗ ಕರೆದೊಯ್ಯಬೇಕು ಎಂದು ಹೇಳುವುದಿಲ್ಲ. 2018ರಲ್ಲಿ ಸುಪ್ರೀಂಕೋರ್ಟ್ ಕಾವೇರಿ ವಿಚಾರದಲ್ಲಿ ಅಂತಿಮ ತೀರ್ಪು ನೀಡಿದೆ. ಹಾಗಾಗಿ ನ್ಯಾಯಾಲಯದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ತೆರಳುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ಗೆ ಕರೆಮಾಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲಿ. ತಮಿಳುನಾಡು ಎಂದೂ ಸಹ ಪ್ರಧಾನಿ ಬಳಿ ನಿಯೋಗ ಹೋಗುವುದಿಲ್ಲ, ಅವರು ನ್ಯಾಯಾಲಯದ ಮೂಲಕವೇ ಪರಿಹಾರ ಪಡೆಯುತ್ತಾರೆ. ನಾವು ಸಹ ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕು ಎಂದರು.
------------------