ಅ.೨೪ರಿಂದ ಕಾವೇರಿ ಜಾಗೃತಿ ರಥಯಾತ್ರೆ

covery jaathre
Published on

ಮಡಿಕೇರಿ: ಸ್ವಚ್ಛ ಕಾವೇರಿಗಾಗಿ ಅ.೨೪ ರಿಂದ ನ.೧೬ರ ವರೆಗೆ ಕಾವೇರಿ ಜಾಗೃತಿ ರಥಯಾತ್ರೆ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಹಾಗೂ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.

ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ಅ.೨೪ ರಿಂದ ನ.೧೬ರ ವರೆಗೆ ೧೫ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿಯಿಂದ ಪೊಂಪ್‌ಹಾರ್‌ವರೆಗೆ ಯಾತ್ರೆ ಕೈಗೊಳ್ಳಲಾಗಿದ್ದು, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಸಾಧುಸಂತರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅ.೨೩ ರಂದು ಮಧ್ಯಾಹ್ನ ೨ ಗಂಟೆಗೆ ಸಾಧು ಸಂತರ ತಂಡ ಕಾವೇರಿ ಮಾತೆಯ ರಥದೊಂದಿಗೆ ಮೈಸೂರು ಮೂಲಕ ಕುಶಾಲನಗರಕ್ಕೆ ಆಗಮಿಸಲಿದ್ದಾರೆ. ಅ.೨೪ ರಂದು ಬೆಳಗ್ಗೆ ೮ ಗಂಟೆಗೆ ತಲಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದ್ದು, ೯ ಗಂಟೆಗೆ ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನಿಧ್ಯದಲ್ಲಿ ಕಾವೇರಿ ಜಾಗೃತಿ ಯಾತ್ರೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಚಾಲನೆ ನೀಡಲಿದ್ದಾರೆ. ವನ್ಯ ಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸ್ಥಾಪಕ ಅಧ್ಯಕ್ಷ ಗಣೇಶ ಸ್ವರೂಪಾನಂದ ಸ್ವಾಮೀಜಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

೧೧ ಗಂಟೆಗೆ ಭಾಗಮಂಡಲ ಸಂಗಮದಲ್ಲಿ ಕಾವೇರಿ ನದಿಗೆ ಮಹಾ ಆರತಿ, ೧೨.೩೦ಕ್ಕೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಗುವುದು. ಸಂಜೆ ೪ ಗಂಟೆಗೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ೧೭೮ನೇ ವಿಶೇಷ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ರಮಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಅ.೨೫ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಕಣಿವೆಯಿಂದ ಶಿರಂಗಾಲ-ಕೊಣನೂರು ಮೂಲಕ ರಾಮನಾಥಪುರ ತೆರಳಿ ೧೨ ಗಂಟೆಗೆ ರಾಮನಾಥಪುರದಲ್ಲಿ ಕಾವೇರಿ ನದಿಗೆ ಮಹಾ ಆರತಿ ಸಲ್ಲಿಸಲಾಗುವುದೆಂದು ತಿಳಿಸಿದರು.

ಮಧ್ಯಾಹ್ನ ೧ ಗಂಟೆಗೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಮಹಾ ಆರತಿ ನಡೆಯಲಿದೆ. ಅ.೨೬ ರಂದು ತಮಿಳುನಾಡಿನತ್ತ ಯಾತ್ರೆ ಸಾಗಲಿದೆ. ನ.೧೬ ರಂದು ತಮಿಳುನಾಡಿನ ಪೊಂಪ್‌ಹಾರ್‌ನಲ್ಲಿ ಕಾವೇರಿ ನದಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಆರತಿ ಜರುಗಲಿದ್ದು, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಚಂದ್ರಮೋಹನ್ ತಿಳಿಸಿದರು.

ಕಾವೇರಿ ರಕ್ಷಣೆಯ ಸಂಬಂಧ ಸರ್ಕಾರ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಆದ್ದರಿಂದ ಕಾವೇರಿಯ ರಕ್ಷಣೆಗಾಗಿ ಸರ್ಕಾರಗಳು ನೂತನ ಯೋಜನೆಗಳನ್ನು ರೂಪಿಸಬೇಕು ಎಂದು ಚಂದ್ರಮೋಹನ್ ಮನವಿ ಮಾಡಿದರು.

ಕಾವೇರಿ ತೀರ್ಥಯಾತ್ರಾ ಸಮಿತಿ ಸ್ಥಾಪಕ ಸಂಯೋಜಕ ಚಿ.ನಾ.ಸೋಮೇಶ್ ಮಾತನಾಡಿ, ಕಾವೇರಿ ಪವಿತ್ರ ನದಿ. ಆದರೆ, ಇಂದು ಹೆಚ್ಚಾಗಿ ತ್ಯಾಜ್ಯಗಳು ಸೇರ್ಪಡೆಗೊಂಡು ಮಲೀನಗೊಳ್ಳುತ್ತಿದ್ದಾಳೆ. ಅದನ್ನು ಕಾಪಾಡುವ ದೃಷ್ಠಿಯಿಂದ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಯಾತ್ರೆ ಸಂದರ್ಭ ಜನರಲ್ಲಿ ಅರಿವು ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುಂಡ, ಕುಶಾಲನಗರ ನಮಾಮಿ ಕಾವೇರಿ ಅಧ್ಯಕ್ಷೆ ವನಿತಾ ಚಂದ್ರಮೋಹನ್, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಆರ್ಯ ವೈಶ್ಯ ಮಂಡಳಿ ನಿರ್ದೇಶಕ ವಿ.ವೈಶಾಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net