ವಿಜಯದಶಮಿ ವೇಳೆಗೆ ಬೆಂಗಳೂರಿಗೆ ಬರಲಿದೆ ಕಾವೇರಿ 5ನೇ ಹಂತದ ನೀರು : ಡಿಕೆಶಿ
Published on:
Copied
Follow Us
ಹಾರೋಹಳ್ಳಿ
ದೇಶದಲ್ಲಿ ಮೂರನೇ ಅತಿ ದೊಡ್ಡ ನಗರವಾಗಿರುವ ಬೃಹತ್ ಬೆಂಗಳೂರಿಗೆ ಜೀವಜಲ ಒದಗಿಸುವ ಕೆಲಸ ಮಾಡಲಾಗುತ್ತಿದೆ ಇದರಿಂದ ಕನಿಷ್ಠ 10 ವರ್ಷಗಳವರೆಗೆ ಬೆಂಗಳೂರಿನ ನೀರಿನ ಸಮಸ್ಯೆ ನೀಗಲಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಬೆಂಗಳೂರು ನೀರು ಸರಬರಾಜು ಕೇಂದ್ರದ ಬಳಿ ಬೆಂಗಳೂರಿನ ತಾತಗುಣಿವರೆಗೆ ಕಾವೇರಿ ಕುಡಿಯುವ ನೀರನ್ನು ಪಂಪ್ ಮಾಡುವ ಐದನೇ ಹಂತದ ಪಂಪ್ ಸ್ಟೇಷನ್ ಯಂತ್ರಗಾರದ ಪರಿವೀಕ್ಷಣೆ ನಡೆಸಿ ಮಾತನಾಡಿದರು.
ಬೆಂಗಳೂರಿನ ನಗರ ಬೃಹತ್ ಆಗಿ ಬೆಳೆಯುತ್ತಿದ್ದು ಕಳೆದ 2014ರಲ್ಲಿ ನಮ್ಮ ಸರ್ಕಾರವೇ ಈ ಬೃಹತ್ ಯೋಜನೆಯನ್ನು ರೂಪಿಸಿತ್ತು ಈಗ ಎಲ್ಲಾ ಕೆಲಸಗಳು ಮುಗಿದಿದ್ದು ಜೊತೆಗೆ ಹಲವಾರು ಸಮಸ್ಯೆಗಳಿದ್ದವು ಅವುಗಳೆಲ್ಲವನ್ನು ನಿವಾರಿಸಿ ವಿಜಯದಶಮಿ ವೇಳೆಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನ ನಗರಕ್ಕೆ ನಾಲ್ಕು ಹಂತದಿಂದ 1450 ಎಂಎಲ್ಡಿ ನೀರು ಸರಬರಾಜಾಗುತ್ತಿದ್ದು ಐದನೇ ಹಂತದಲ್ಲಿ 750 ಎಂಎಲ್ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ ಮಹದೇವಪುರ ಬೆಂಗಳೂರು ದಕ್ಷಿಣ ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಬ್ಯಾಟರಾಯನಪುರ, ಆನೇಕಲ್ ಯಶವಂತಪುರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆ ಇದಾಗಿದೆ ಎಂದು ಹೇಳಿದರು.
ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಟ್ಯಾಂಕರ್ ನೀರಿನ ಅವಶ್ಯಕತೆಯನ್ನು ಕಡಿಮೆ ಮಾಡಿ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡ ಪ್ರದೇಶಗಳಿಗೆ ನೀರು ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಈ ಮಹತ್ವಕಾಂಕ್ಷಿ ಬೃಹತ್ ಹಾಗೂ ದೇಶದಲ್ಲಿ ಅತಿ ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲು 4336 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕಾವೇರಿ ಐದನೇ ಹಂತದ ಯೋಜನೆ ಜಾರಿ ಬಳಿಕ ಜಲ ಮಂಡಳಿಯ ಆದಾಯ ಹೆಚ್ಚಲಿದ್ದು 10.64 ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ ಎಂದು ಹೇಳಿದರು.
ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ಬೃಹತ್ ಯೋಜನೆಗಾಗಿದ್ದು ಟೀಕೆ ಹಳ್ಳಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ ಇದರಿಂದ ಬೃಹತ್ ಬೆಂಗಳೂರು ನಗರದ ನೀರಿನ ಬೇಡಿಕೆಯನ್ನು ಗಣನೀಯವಾಗಿ ನಿಭಾಯಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ ಅಲ್ಲದೆ ಬೆಂಗಳೂರಿನ ಪ್ರತಿ ಮೂಲೆ ಮೂಲೆಗೂ ಮನೆಮನೆಯ ಬಾಗಿಲಿಗೆ ಜೀವ ಜಲ ಕಾವೇರಿಯನ್ನು ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಎಸ್ ರವಿ, ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮಪ್ರಸಾದ್ ಮನೋಹರ್, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಬಿ ಎಂ ಆರ್ಡಿಎ ಆಯುಕ್ತರಾದ ರಾಜೇಂದ್ರ ಚೋಳನ್ ಸ್ಥಳೀಯ ಮುಖಂಡರುಗಳು, ಜಲ ಮಂಡಳಿ ಅಧಿಕಾರಿಗಳು ಇತರರು ಹಾಜರಿದ್ದರು.