ಭಾಗಮಂಡಲ. ತಲಕಾವೇರಿಯಲ್ಲಿ ಜನಜಂಗುಳಿ

cauvery
Published on

ಮಡಿಕೇರಿ:

ಜಿಲ್ಲೆಯ ಪವಿತ್ರ ತೀರ್ಥಕ್ಷೇತ್ರಗಳಾದ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಶುಕ್ರವಾರದಿಂದ ಈಚೆಗೆ ಹೆಚ್ಚಿನ ಜನಜಂಗುಳಿ ಕಂಡುಬರುತ್ತಿದೆ. ದಿಪಾವಳಿ, ಕನ್ನಡ ರಾಜ್ಯೋತ್ಸವ ರಜೆ ಹಾಗೂ ವಾರಾಂತ್ಯದ ದಿನಗಳು ಒಟ್ಟಿಗೆ ಬಂದಿರುವ ಕಾರಣ ಪ್ರವಾಸಿಗರ ದಂಡು ದೊಡ್ಡ ಪ್ರಮಾಣದಲ್ಲಿ ಭೇಟಿ ಕೊಡುತ್ತಿದೆ. ಇದರಿಂದಾಗಿ ಈ ಎರಡು ಕ್ಷೇತ್ರಗಳಲ್ಲೂ ಸ್ಥಳೀಯರ ಧಾರ್ಮಿಕ ಚಟುವಟಿಕೆಗಳಿಗೆ ಸಮಸ್ಯೆ ಆಗುತ್ತಿದ್ದು, ಭಕ್ತರಿಗೋಸ್ಕರ ವಿಶೇಷ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯ ಕೇಳಿಬರುತ್ತಿದೆ.

ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಮತ್ತು ಕಾವೇರಿ ಉಗಮಸ್ಥಾನ ತಲಕಾವೇರಿಗೆ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಭೇಟಿ ಕೊಟ್ಟು ತೀರ್ಥಸ್ನಾನ ಮಾಡಿ ಪೂಜೆ ಸಲ್ಲಿಸುವುದು ಕೊಡಗಿನಲ್ಲಿ ರೂಢಿಯಲ್ಲಿ ಇರುವ ಸಂಪ್ರದಾಯ. ಅದರಲ್ಲೂ ಕಾವೇರಿ ತೀರ್ಥೋದ್ಭವದ ತುಲಾಸಂಕ್ರಮಣದಿAದ ಮುಂದಿನ ಒಂದು ತಿಂಗಳ ಕಿರು ಸಂಕ್ರಮಣದ ಅವಧಿಯಲ್ಲಿ ಶ್ರೀ ಕ್ಷೇತ್ರಗಳಿಗೆ ಯಾತ್ರೆ ತೆರಳುವುದಕ್ಕೆ ವಿಶೇಷ ಮಹತ್ವವಿದೆ. ಜಿಲ್ಲೆಯ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಈ ಬಾರಿ ಅ.17ರಂದು ಬೆಳಗ್ಗೆ 7.40ರ ತುಲಾ ಲಗ್ನದಲ್ಲಿ ಶ್ರೀ ಕಾವೇರಿ ತೀರ್ಥೋದ್ಭವ ಸಂಭವಿಸಿದೆ. ಅಲ್ಲಿಂದ ಈ ತಿಂಗಳ 16ರ ತನಕ ಭಗಂಡ ಮುನಿಯ ತಪೋಕ್ಷೇತ್ರ ಭಾಗಮಂಡಲದಲ್ಲಿ ಜಾತ್ರೆಯ ಸಂಭ್ರಮ ಇರುತ್ತದೆ.

ಕೊಡಗಿನವರ ಪ್ರಮುಖ ಹಬ್ಬಗಳಲ್ಲಿ ಕಾವೇರಿ ಸಂಕ್ರಮಣವೂ ಒಂದು. ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥೋದ್ಭವದ ನಂತರ ಈ ಹಬ್ಬ ಆಚರಿಸಲಾಗುತ್ತದೆ. ಗಂಗಾ ನದಿ ಕಾವೇರಿಯೊಂದಿಗೆ ಸೇರಿಕೊಳ್ಳುವ ಸಂದಭÀðದಲ್ಲಿ ತೀರ್ಥೋದ್ಭವ ಆಗುತ್ತದೆ ಎನ್ನುವುದು ಆಸ್ತಿಕರ ನಂಬಿಕೆ. ನಂತರದ ಒಂದು ತಿಂಗಳಲ್ಲಿ ಶ್ರೀ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ತಲಕಾವೇರಿಯ ಪವಿತ್ರ ಕೊಳದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಗಂಗೆಯಲ್ಲಿ ಮಿಂದಷ್ಟೇ ಪುಣ್ಯ ಬರುತ್ತದೆ ಎನ್ನುವ ಪ್ರತೀತಿ ಇದೆ.

ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ತೀರ್ಥೋದ್ಭವ ದಿನ ಮತ್ತು ನಂತರದ ಜಾತ್ರೆಯ ಒಂದು ತಿಂಗಳಲ್ಲಿ ಪಿಂಡ ಪ್ರದಾನ ಮಾಡುವುದರಿಂದ ಅವರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆಯೂ ಇರುವುದರಿಂದ ಕೊಡಗಿನವರು ಮಾತ್ರವಲ್ಲದೆ ವಿವಿಧ ಕಾರಣಕ್ಕೆ ಬೇರೆ ಬೇರೆ ಕಡೆ ನೆಲೆಸಿರುವ ಕೊಡಗು ಮೂಲದವರು ಕೂಡ ತುಲಾಸಂಕ್ರಮಣ ಜಾತ್ರೆಯ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪಿಂಡ ಪ್ರದಾನ ಮಾಡಿಸುತ್ತಾರೆ. ಹೀಗೆ ಕಾವೇರಿ ಕ್ಷೇತ್ರಕ್ಕೆ ಬಂದವರಿಗೆ ಈ ಬಾರಿ ಅ.31ರಿಂದ ನ.3 (ಭಾನುವಾರ) ತನಕವೂ ಇಲ್ಲಿ ಮನಃಪೂರ್ತಿ ಪೂಜೆ ಸಲ್ಲಿಸಿದ ಆತ್ಮತೃಪ್ತಿಯೇ ಸಿಕ್ಕಿಲ್ಲ.

ಸಾಮಾನ್ಯವಾಗಿ ತುಲಾಮಾಸದಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಸಾಮಾನ್ಯಕ್ಕಿಂತ ಜನಸಂದಣಿ ಹೆಚ್ಚಿರುತ್ತದೆಯಾದರೂ ಪೂಜೆ ಪುನಸ್ಕಾರಗಳಿಗೆ ಯಾವುದೇ ಅಡ್ಡಿ ಆಗುತ್ತಿರಲಿಲ್ಲ. ಆದರೆ ಈ ವರ್ಷ ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯದ ರಜಾ ದಿನಗಳು ಒಟ್ಟೊಟ್ಟಿಗೆ ಬಂದಿದ್ದರಿAದ ಪ್ರವಾಸಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಸಹಜವಾಗಿ ಪ್ರವಾಸಿಗರ ದಟ್ಟಣೆಯೂ ಹೆಚ್ಚಿತ್ತು. ಇದು ತೀರ್ಥಕ್ಷೇತ್ರಗಳಾದ ಭಾಗಮಂಡಲ ಮತ್ತು ತಲಕಾವೇರಿ ಮೇಲೂ ಪರಿಣಾಮ ಬೀರಿದೆ.

ಪಿಂಡ ಪ್ರದಾನ, ಶಾಂತಿ ಪೂಜೆ ಸೇರಿದಂತೆ ವಾರ್ಷಿಕ ಧಾರ್ಮಿಕ ಆಚರಣೆಗಳಿಗೆ ಸ್ಥಳೀಯ ಭಕ್ತರು ಬೆಳ್ಳಂಬೆಳಗ್ಗೆಯೇ ಶ್ರೀ ಕ್ಷೇತ್ರಗಳಿಗೆ ತೆರಳುವಾಗ ಆಗಲೇ ಅಲ್ಲಿ ಪ್ರವಾಸಿಗರು ಬೀಡುಬಿಟ್ಟಿದ್ದರು. ಭಾಗಮಂಡಲದಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವ ಚಾಮುಂಡಿ ಕಣದಲ್ಲಿ ನಡೆದಾಡಲೂ ಸಾಧ್ಯವಾಗದಷ್ಟು ಇಕ್ಕಟ್ಟಿನಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಕೇಶಮುಂಡನ ಪ್ರದೇಶ, ಪಿಂಡ ಪ್ರದಾನ ಸ್ಥಳ, ತ್ರಿವೇಣಿ ಸಂಗಮದಲ್ಲೂ ಪ್ರವಾಸಿಗರೇ ತುಂಬಿಕೊAಡಿದ್ದರು. ಇಲ್ಲಿ ಹೇಗೋ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಮುಗಿಸಿ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ತೆರಳಿದರೆ ಅಲ್ಲೂ ಕಿಮೀ ಉದ್ದದ ಸರದಿ ಸಾಲು ಭಕ್ತರನ್ನು ಹೈರಾಣಾಗಿಸುವಂತಿತ್ತು.

ಶ್ರೀ ಕ್ಷೇತ್ರ ತಲಕಾವೇರಿಯ ಪರಿಸ್ಥಿತಿಯೂ ಇದಕ್ಕಿಂದ ಭಿನ್ನವೇನೂ ಆಗಿರಲಿಲ್ಲ. ಭಾಗಮಂಡಲದ ಟೋಲ್ ಸಂಗ್ರಹ ಕೇಂದ್ರದ ಬಳಿಯಿಂದಲೇ ವಾಹನಗಳ ಸರತಿ ಸಾಲು ಶುರುವಾಗಿತ್ತು. ಭಾಗಮಂಡಲದಿAದ ತಲಕಾವೇರಿಗೆ ಸಂಪೂರ್ಣ ಏರು ಹಾದಿಯಲ್ಲಿ 8 ಕಿಮೀ ಪ್ರಯಾಸಕರ ಪ್ರಯಾಣ ಮಾಡಿ ತೆರಳಿದರೆ ಅಲ್ಲೂ ದೇವಾಲಯದ ತನಕ ವಾಹನಗಳು ತೆರಳಲು ಸಾಧ್ಯವಾಗದ ಸ್ಥಿತಿ. ಹಾಗಾಗಿ ದೇವಾಲಯದಿಂದ ಒಂದು ಕಿಮೀ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಮತ್ತದೇ ಏರು ಹಾದಿಯಲ್ಲಿ ನಡೆಯುವ ಅನಿವಾರ್ಯತೆ.

ವಯಸ್ಸಾದವರು, ನಡೆಯಲು ಸಾಧ್ಯವಾಗದವರಿಗೆ ಕರುಣೆ ತೋರಿಸುವ ಸ್ಥಿತಿಯಲ್ಲೂ ಪೊಲೀಸರು ಇರಲಿಲ್ಲ. ಎಲ್ಲಾ ವಾಹನಗಳನ್ನು 1 ಕಿಮೀ ದೂರದಲ್ಲೇ ತಡೆದು ನಿಲ್ಲಿಸಲಾಗುತ್ತಿತ್ತು. ಕಷ್ಟಪಟ್ಟು ಹೇಗೋ ದೇವಾಲಯ ತಲುಪಿದರೆ ಇಲ್ಲೂ ಮತ್ತೆ ಕಿಮೀಗಿಂತಲೂ ಉದ್ದದ ಸರತಿ ಸಾಲು. ವರ್ಷಕ್ಕೆ ಒಮ್ಮೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಇದರಿಂದಾಗುವ ಕಿರಿ ಕಿರಿ ಅಷ್ಟಿಷ್ಟಲ್ಲ. ನೆಮ್ಮದಿಯಿಂದ ಪೂಜೆ ಸಲ್ಲಿಸಲು ಆಗದ ನೋವು ಇವರಲ್ಲಿ ಕಾಣುತ್ತಿತ್ತು.

ಮೊದಲೆಲ್ಲಾ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಇಷ್ಟಬಂದಷ್ಟು ಹೊತ್ತು ದೇವರ ಮುಂದೆ ಪ್ರಾರ್ಥಿಸುವ ಅವಕಾಶ ಇತ್ತು. ಈಗಿನಂತೆ 'ಬೇಗ ಮಂದೆ ಹೋಗಿ' ಎಂದು ತಳ್ಳುವವರು ಇರಲಿಲ್ಲ. ತ್ರಿವೇಣಿ ಸಂಗಮ, ತಲಕಾವೇರಿಯ ಕೊಳದಲ್ಲಿ ಮನಸ್ಸಿಗೆ ಸಮಧಾನ ಆಗುವಷ್ಟು ಹೊತ್ತು ತೀರ್ಥಸ್ನಾನ ಮಾಡಬಹುದಿತ್ತು. ಈಗಿನಂತೆ 'ಮೂರು ಮುಳುಗು ಹಾಕಿ ಬೇಗ ಮೇಲೆ ಹತ್ತಿ' ಎನ್ನುವವರು ಇರಲಿಲ್ಲ. 'ಬ್ರಹ್ಮಕುಂಡಿಕೆಯ ಪಕ್ಕದಲ್ಲಿ ಅರ್ಚಕರ ಎದುರು ಕುಳಿತು ನೇರವಾಗಿ ಬ್ರಹ್ಮಕುಂಡಿಕೆಗೆ ಕುಂಕುಮಾರ್ಚನೆ ಮಾಡುತ್ತಿದ್ದರೆ ಸಿಗುತ್ತಿದ್ದ ದೈವಾನುಭೂತಿ ಈಗ ದೂರದಲೆಲ್ಲೋ ಕೂತು ತಟ್ಟೆಗೆ ಕುಂಕುಮ ಹಾಕುವುದರಿಂದ ಸಿಗುತ್ತಿಲ್ಲ,' ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಭಾಗಮಂಡಲ ಮತ್ತು ತಲಕಾವೇರಿ ಕೊಡಗಿನವರ ಪಾಲಿಗೆ ಪುಣ್ಯಕ್ಷೇತ್ರ. ಈ ಎರಡೂ ಕ್ಷೇತ್ರಗಳ ಜತೆಗೆ ಸ್ಥಳೀಯರಿಗೆ ಧಾರ್ಮಿಕವಾದ ಸಂಬAಧಗಳಿವೆ. ಇಲ್ಲಿಗೆ ತೆರಳಿದಾಗ ಹೆಣ್ಣುಮಕ್ಕಳು ತವರಿಗೆ ಹೋದಾಗ ಅನುಭವಿಸುವಂಥ ಖುಷಿ ಆಗುತ್ತದೆ ಎನ್ನುತ್ತಾರೆ ಆಸ್ತಿಕರು. ಆದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಪಾಲಿಗೆ ಇದೊಂದು ಪ್ರವಾಸಿತಾಣ ಮಾತ್ರ. ಅವರಿಂದ ಧಾರ್ಮಿಕ ವಾತಾವರಣ ನಿರೀಕ್ಷಿಸಲು ಕೂಡ ಸಾಧ್ಯವಾಗುವುದಿಲ್ಲ.

ಸ್ಥಳೀಯ ಆಸ್ತಿಕರಿಗೆ ಮುಕ್ತ ವಾತಾವರಣದಲ್ಲಿ ಪೂಜೆ ಸಲ್ಲಿಸಲು ಪ್ರತ್ಯೇಕವಾದ ವ್ಯವಸ್ಥೆಯೊಂದರ ಅಗತ್ಯವಿದೆ ಎನ್ನುವುದು ಭಕ್ತರ ಅಭಿಪ್ರಾಯ. ತೀರ್ಥಸ್ನಾನ ಮಾಡಲು, ಶ್ರಿöçà ಭಗಂಡೇಶ್ವರ, ಮಾತೆ ಕಾವೇರಿಗೆ ಪೂಜೆ ಸಲ್ಲಿಸಲು ಸ್ಥಳೀಯರಿಗೆ ಆದ್ಯತೆ ನೀಡುವಂತಾಗಬೇಕು. ಪ್ರವಾಸಿಗ ಆದ್ಯತೆ ಗಮನಿಸಿ ಅವರಿಗೆ ಬೇರೆಯದ್ದೇ ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ದೇವಾಲಯದ ಆಡಳಿತ ಚಿಂತಿಸುವAತಾಗಲಿ ಎನ್ನುವ ಆಗ್ರಹ ಕೊಡಗಿನ ಭಕ್ತರಿಂದ ಕೇಳಿ ಬರುತ್ತಿದೆ.

ನಮ್ಮ ಹಿರಿಯರಿಗೆ ಪಿಂಡ ಪ್ರದಾನ ಮಾಡಲು ಅ.17ರ ತುಲಾಸಂಕ್ರಮಣದಿAದ ಅ.16ರ ಕಿರು ಸಂಕ್ರಮಣ ತನಕ ನಾವು ಸ್ಥಳೀಯರು ತಲಕಾವೇರಿಗೆ ಬರುತ್ತೇವೆ. ಪಿಂಡ ಪ್ರದಾನ ಮಾಡಿದ ನಂತರ ಮನೆಗೆ ತೆರಳಿ ಹಿರಿಯರಿಗೆ ಎಡೆ ಹಾಕುವುದು ನಮ್ಮಲ್ಲಿರುವ ಪದ್ಧತಿ. ಆದರೆ ಇಲ್ಲಿ ತಲಕಾವೇರಿಗೆ ಬಂದರೆ ಪ್ರವಾಸಿಗರ ಜತೆಯಲ್ಲಿ ಸರದಿಯಲ್ಲಿ ನಿಂತು ಧಾರ್ಮಿಕ ಆಚರಣೆ ಮಾಡಲು ತೊಂದರೆ ಆಗುತ್ತದೆ. ಪ್ರವಾಸಿಗರ ದಟ್ಟಣೆ ಹೆಚ್ಚಿದ್ದಾಗೆ ಪ್ರವಾಸಿಗರಿಗೆ ಮುಖ್ಯ ಗೇಟ್ ಬಳಿಯಿಂದಲೇ ದರ್ಶನಕ್ಕೆ ಅವಕಾಶ ಕೊಟ್ಟರೆ ಒಳ್ಳೆಯದು.

ಮಂಞÂರ ಕುಟ್ಟಪ್ಪ, ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net