

ಬೆಂಗಳೂರು: ಅಪಾರ್ಟ್ಮೆಂಟ್ ಒಂದರ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರಿನ ಚಕ್ರ ಹರಿದು ಆಕೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಕಸವನಹಳ್ಳಿಯಲ್ಲಿ ನಡೆದಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನೇಪಾಳ ಮೂಲದ ದಂಪತಿ ಜೋಗ್ ಜಾತರ್ ಹಾಗೂ ಅನಿತಾ ದಂಪತಿಯ ಪುತ್ರಿ ಅರ್ಬಿನಾ (3) ಮೃತ ಮಗು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಟೆಕ್ಕಿ ಸುಮನ್ ಕೇಶವ್ದಾಸ್ ಎಂಬುವವರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಡಿಸೆಂಬರ್ 10ರಂದು ಕಸವನಹಳ್ಳಿಯಲ್ಲಿರುವ ಸಮೃದ್ಧಿ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸದ ಕಾರು ಚಾಲಕ ಆಕೆಯ ಮೇಲೆ ಹರಿಸಿಕೊಂಡು ಮುಂದಕ್ಕೆ ಹೋಗಿದ್ದರು. ಕಾರಿಗೆ ಸಿಲುಕಿದ ಅರ್ಬಿತಾ ಮೇಲಕ್ಕೆ ಏಳಲು ಸಾಧ್ಯವಾಗದೆ ಜೋರಾಗಿ ಅಳಲು ಶುರು ಮಾಡಿದ್ದಾಳೆ. ಬಳಿಕ ಆಕೆಯನ್ನು ಪೋಷಕರು ಪರಿಶೀಲಿಸಿದಾಗ ಕೈ ಹಾಗೂ ಕಾಲಿನ ಭಾಗಗಳಲ್ಲಿ ತರಚಿದ ಗಾಯಗಳಾಗಿತ್ತು. ಗೇಟ್ನ ಕಬ್ಬಿಣದ ರಾಡ್ ತಗುಲಿ ಗಾಯವಾಗಿರಬೇಕು ಎಂದುಕೊಂಡ ಪೋಷಕರು ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮಗುವನ್ನು ಪರೀಕ್ಷಿಸಿದ ವೈದ್ಯರು ಆಕೆಯ ಬಲಗೈ ಭುಜ ಮುರಿದಿದ್ದು, ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ. ನಂತರ ಪೋಷಕರು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವನ್ನು ಪರಿಶೀಲಿಸಿದ ವೈದ್ಯರು ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆಂತರಿಕ ರಕ್ತಸ್ರಾವದಿಂದ ಮಗುವಿನ ಮೃತಪಟ್ಟಿರುವುದು ತಿಳಿದು ಬಂದಿತ್ತು.
ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಪಾರ್ಟ್ಮೆಂಟ್ ಸಮೀಪದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ. ಈ ವೇಳೆ ಮಗುವಿನ ಮೇಲೆ ಕಾರು ಹರಿದಿರುವುದು ಬೆಳಕಿಗೆ ಬಂದಿದೆ. ಆರೋಪಿ ಸುಮನ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.