ಜಾನುವಾರುಗಳಿಗೆ ಲಸಿಕಾ ಅಭಿಯಾನ, ಉತ್ತಮ ಸಾಧನೆ

888
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕೆ ಅಭಿಯಾನದಡಿ ಶೇ.92 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6 ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. 1.89 ಲಕ್ಷ ರಾಸುಗಳ ಪೈಕಿ 1.74 ಲಕ್ಷ ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಆದಷ್ಟು ಬೇಗ ಪೂರ್ಣ ಶೇ.100 ರಷ್ಟು ಗುರಿಯನ್ನು ಸಾಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕಳೆದ ಏಪ್ರಿಲ್ ಮತ್ತು ಮೇನಲ್ಲಿ 5ನೇ ಸುತ್ತಿನ ಲಸಿಕಾ ಅಭಿಯಾನದಡಿ ಜಿಲ್ಲೆಯಲ್ಲಿನ 1,77,661 (ಹಸು, ಎಮ್ಮೆ) ಜಾನುವಾರುಗಳ ಪೈಕಿ 1,76,191 ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.99 ರಷ್ಟು ಸಾಧನೆ ತೋರಲಾಗಿತ್ತು.

* ಚರ್ಮಗಂಟು ಲಸಿಕಾ ಆಂದೋಲನ

ಜಿಲ್ಲೆಯಲ್ಲಿ ಡಿ.4 ರವರೆಗೆ ಚರ್ಮಗಂಟು ರೋಗದ ಲಸಿಕೆಯ ಆಂದೋಲನವನ್ನು ಕೈಗೊಳ್ಳಲಾಗಿದೆ. ಚರ್ಮದ ಮೇಲೆ ಗಂಟು ಗುಳ್ಳೆಗಳು ಎದ್ದು, ನೀರು ಮತ್ತು ಮೇವು ಸೇವಿಸದೇ ನಿತ್ರಾಣಗೊಂಡು ರಾಸುಗಳು ಮೃತಪಡಲು ಚರ್ಮಗಂಟು ರೋಗ ಪ್ರಮುಖ ಕಾರಣವಾಗಿದೆ. ಇದಕ್ಕೆ ಕಳೆದ ಸಾಲಿನಲ್ಲಿ 480 ರಾಸುಗಳು ಮೃತಪಟ್ಟಿದ್ದು ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಇದೇ ವೇಳೆ ಸರ್ಕಾರವು ಮೃತ ಕರುವಿಗೆ 5 ಸಾವಿರ, ಎಮ್ಮೆ, ಹಸುವಿಗೆ ತಲಾ 20 ಸಾವಿರ ಮತ್ತು ಎತ್ತು ಮೃತಪಟ್ಟರೆ ತಲಾ 30 ಸಾವಿರ ಪರಿಹಾರ ನೀಡುವುದರ ಜತೆಗೆ ಲಸಿಕಾ ಅಭಿಯಾನವನ್ನು ಕೈಗೊಂಡಿತ್ತು.

ಜಿಲ್ಲೆಯಲ್ಲಿ ಕಳೆದ ವರ್ಷ ಎಮ್ಮೆಗಳನ್ನು ಹೊರತುಪಡಿಸಿ 1,63,616 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಪೈಕಿ 1,58,141 ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ಶೇ.97 ರಷ್ಟು ಗುರಿ ಸಾಧಿಸಲಾಗಿತ್ತು. ಅದರಂತೆ ಈ ಬಾರಿಯೂ ಡಿ.4 ರವರೆಗೆ ಲಸಿಕಾ ಆಂದೋಲನವನ್ನು ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net