ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ದಯಾನಂದ ಸ್ವಾಮೀಜಿ ಮನವಿ

Dayanand-Swameeji-Leeter-696x522
Published on

ಬೆಂಗಳೂರು : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ಗೋವಂಶ-ಜಾನುವಾರು ರಕ್ಷಾದಳದ ಸಂಚಾಲಕ ಹಾಗೂ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಗೋವಧೆ ಪ್ರತಿಬಂಧಕ ಕಾಯ್ದೆ 1964 ಮತ್ತು ಜಾನುವಾರು ಪರಿರಕ್ಷಣಾ ಕಾನೂನಿನಲ್ಲಿನ ಕೆಲವು ನ್ಯೂನತೆಗಳನ್ನು 2010ರಲ್ಲಿ ಸರ್ಕಾದದಿಂದ ತಿದ್ದುಪಡಿ ಮಾಡಿ ಗೋಹತ್ಯೆ ನಿಷೇಧ ಮಸೂದೆಗೆ ಎರಡೂ ಸಂಪುಟಗಳ ಒಪ್ಪಿಗೆ ಪಡೆಯಲಾಗಿತ್ತು. ನಂತರ, ಅಧಿಕಾರಕ್ಕೆ ಬಂದ ಸರ್ಕಾರ ಮಸೂದೆ ವಾಪಸ್ ಪಡೆದುಕೊಂಡಿತು. ಇದರಿಂದಾಗಿ ಲಕ್ಷಾಂತರ ಜಾನುವಾರುಗಳ ಮಾರಣಹೋಮ ನಡೆದಿದೆ. ಈಗ ಮತ್ತೊಮ್ಮೆ ಗೋಹತ್ಯೆ ನಿಷೇಧ ಕಾನೂನು ಬಿಗಿಗೊಳಿಸಿ, ಕಾಯ್ದೆ ಜಾರಿಗೊಳಿಸುವ ಮೂಲಕ ‘ಗೋವಂಶ-ಜಾನುವಾರು ಹತ್ಯೆ ಮುಕ್ತ’ ರಾಜ್ಯವನ್ನಾಗಿ ನಿರ್ಮಿಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಈ ಕಾಯ್ದೆಯಲ್ಲಿ ಯಾವುದೇ ವಯಸ್ಸಿನ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಯಾರೊಬ್ಬರೂ, ಯಾವುದೇ ಕಾರಣಕ್ಕೂ ಹತ್ಯೆ ಮಾಡಬಾರದು. ಹತ್ಯೆ ಉದ್ದೇಶಕ್ಕಾಗಿ ರಾಜ್ಯದ ಒಳಗೆ ಅಥವಾ ಹೊರಗೆ ಜಾನುವಾರುಗಳ ಸಾಗಾಣಿಕೆ ನಿಷೇಧಿಸಬೇಕು. ಜತೆಗೆ, ಕರ್ನಾಟಕ ರಾಜ್ಯ ಗೋಸೇವಾ ಆಯೋಗವನ್ನು ಪುನರ್ ರೂಪಿಸಬೇಕು ಎಂದು ವಿನಂತಿಸಿದ್ದಾರೆ. ಮನವಿ ಪತ್ರ ಸಲ್ಲಿಕೆ ವೇಳೆ ಜಾನುವಾರು ರಕ್ಷಣಾ ದಳದ ಸಂಚಾಲಕ ಉತ್ತಮ್ ಚಂದ್ ಚಝರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net