

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸುವ ಕೃಷಿ ಮೇಳದಲ್ಲಿ ಜಾನುವಾರ ಮೇಳವೂ ಜನಾಕರ್ಷಣೀಯವಾಗಿದೆ. ಕೃವಿವಿ ಮುಖ್ಯ ದ್ವಾರ ಪ್ರವೇಶಿಸುತ್ತಿದ್ದಂತೆ ಎಡಕ್ಕೆ ತಿರುಗಿದರೆ ಸಾಕು ಬಗೆಬಗೆಯ ಜಾನುವಾರುಗಳು ಕಾಣ ಸಿಗುತ್ತವೆ.
ಖಿಲಾರಿ ಎತ್ತುಗಳ ಜೋಡಿ, ಎಮ್ಮೆ, ಕೋಣ, ಹೋರಿಗಳು, ಆಡು, ಟಗರುಗಳು, ವಿವಿಧ ತಳಿಯ ಕೋಳಿಗಳು ಮೇಳಕ್ಕೆ ಆಗಮಿಸಿವೆ. ಪ್ರತಿ ಬಾರಿ ನೆರೆ ರಾಜ್ಯದ ಎಮ್ಮೆ ತಳಿ ನೋಡಿದವರಿಗೆ ಈ ಸಲ ನಮ್ಮೂರಿನ ಎಮ್ಮೆ ತಳಿಯ ದರ್ಶನವಾಗುತ್ತಿದೆ. 100ಕ್ಕೂ ಹೆಚ್ಚು ಜಾನುವಾರುಗಳು ಗಮನ ಸೆಳೆಯುತ್ತಿವೆ.
ಆಕಳಗಳ ತಳಿಗಳಲ್ಲಿ ಗಿರ್, ಥಾರಪಾರಕರ, ದೇವಣಿ, ಜರ್ಸಿ ಮಿಶ್ರತಳಿ, ಎಚ್.ಎಫ್ .ದೇವಣಿ, ಎಮ್ಮಗಳಲ್ಲಿ ಧಾರವಾಡಿ, ಮುರ್ರಾ , ಜಾಫರಾಬಾದಿ ಸೇರಿ ವಿವಿಧ ತಳಿಯ ಕೋಣ, ಹೋರಿಗಳು, ಕೆಂಗೋರಿಯ ಕುರಿ, ತಲೆಚೇರಿ ತಳಿಯ ಆಡುಗಳೂ ಪ್ರದರ್ಶನದಲ್ಲಿವೆ. ಐದಾರು ತಳಿಗಳ ಕೋಳಿಗಳು, ರಾಜಸ್ಥಾನ ಮೂಲದ ಕಾಟೇವಾಡಿ ತಳಿಯ ಕುದುರೆ, ಮುಧೋಳ ಶ್ವಾನಗಳು, ಹಂದಿ ತಳಿಗಳೂ ಸಹ ಮೇಳದಲ್ಲಿ ಕಾಣಸಿಗುತ್ತವೆ.
ಗಮನ ಸೆಳೆದ ರಾಜಾ, ಕೊಲೆಗಾರ, ಡಾನ್: ಈ ಬಾರಿಯ ಜಾನುವಾರ ಮೇಳದಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ "ರಾಣೆಬೆನ್ನೂರ ಕಾ ರಾಜಾ, ತಡಸನಹಳ್ಳಿ ಕೊಲೆಗಾರ ಹಾಗೂ ಶಿರಾಳಕೊಪ್ಪದ ಎ-1 ಡಾನ್ 61 ಎಂಬ ಹೋರಿಗಳು . ರಾಣೆಬೆನ್ನೂರ ಕಾ ರಾಜಾ ವಿಶಿಷ್ಟ ಅಲಂಕಾರ, ಶೃಂಗಾರದಿಂದಲೇ ಕಣ್ಮನ ಸೆಳೆಯುತ್ತಿದೆ.
ಮೈತುಂಬ ಚೆಂದದ ವಸ್ತ್ರ, ಮುಖದ ಮೇಲೆ ಚಿತ್ತಾರ, ಕೋಡಿಗೆ ಕಿರೀಟದಂತಹ ಸರ್ವಾಲಂಕಾರವು ಹೋರಿಗಳ ಖದರ್ ಹೆಚ್ಚಿಸಿದೆ. ಹಾವೇರಿ, ಶಿವಮೊಗ್ಗ ಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಈ ಹೋರಿಗಳು ಭಾಗವಹಿಸಿ ಬಹುಮಾನ ಪಡೆದಿದೆ. ತಡಸನಹಳ್ಳಿ ಕೊಲೆಗಾರ 25ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಹಲವು ಸ್ಪರ್ಧೆಗಳಲ್ಲಿ ಬಂಗಾರ, ಬೆಳ್ಳಿ ಗೆದ್ದಿದೆ. ಹಾನಗಲ್ನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬುಲೆಟ್ ಬೈಕ್ ಗೆದ್ದ ಕೀರ್ತಿ ಪಡೆದಿದೆ.