ಗಮನ ಸೆಳೆದ ಜಾನುವಾರು ಪ್ರದರ್ಶನ

10 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳದಲ್ಲಿ ಏರ್ಪಡಿಸುವ ಜಾನುವಾರು ಮೇಳದಲ್ಲಿ ಶ್ವಾನಗಳ ಪ್ರದರ್ಶನ ಇಡೀ ಮೇಳದ ಮೆರಗು ಹೆಚ್ಚಿಸುತ್ತದೆ. ಆದರೆ ಈ ಬಾರಿ ಶ್ವಾನ ಪ್ರದರ್ಶನ ಇಲ್ಲದಿರುವುದು ಶ್ವಾನ ಪ್ರಿಯರಿಗೆ ನಿರಾಸೆ ಆಗಿದ್ದರೆ, ರೈತರಿಗೆ ಖುಷಿಯಾಗಿದೆ.
ಕೃಷಿ ಮೇಳ ಅಂದ ಮೇಲೆ ರೈತರಿಗೆ ಅನುಕೂಲವಾಗುವ ಮಾಹಿತಿ ಮಳಿಗೆಗಳು ಇದ್ದರೇ ಚೆಂದ. ಆದರೆ ಮೇಳದಲ್ಲಿ ಶೇ. 10-15ರಷ್ಟು ಮಳಿಗೆಗಳು ರೈತರಿಗೆ ಬೇಡವಾಗಿದೆ. ಅದರಲ್ಲಿ ಶ್ವಾನ ಪ್ರದರ್ಶನವೂ ಒಂದು. ನಗರದ ಜನರು ಒಂದು ದಿನ ಬಂದು ತಮ್ಮ ಸಾಕು ನಾಯಿಗಳ ಪ್ರದರ್ಶನ ಮಾಡಿ ಹೋಗುತ್ತಾರೆ. ಅವುಗಳಿಗೆ ಜಾಗವೂ ಸಾಕಷ್ಟು ಬೇಕು. ಅದೇ ಜಾಗದಲ್ಲಿ ರೈತರಿಗೆ ಉಪಯೋಗವಾಗುವ ಜಾನುವಾರುಗಳ ಪ್ರದರ್ಶನ ನಡೆದರೆ ಅನುಕೂಲ ಎಂಬ ಮಾತು ಕೇಳಿ ಬಂದಿತ್ತು. ಹೀಗಾಗಿ ಈ ಬಾರಿ ಶ್ವಾನ ಪ್ರದರ್ಶನ ರದ್ದಾಗಿದೆ ಎನ್ನಲಾಗಿದೆ.
ಕಳೆದ ವರ್ಷ ವಿವಿಧ ತಳಿಯ ಎಮ್ಮೆ, ಆಕಳು, ಕೋಣಗಳು ಇಲ್ಲದೆ ಕಳೆಗುಂದಿತ್ತು. ಈ ಬಾರಿ ಹೆಚ್ಚಿನ ತಳಿಯ ಜಾನುವಾರು ಆಗಮಿಸಿದ್ದರಿಂದ ರೈತರು ತಮ್ಮ ಕೃಷಿಗೆ ಅನುಕೂಲವಾಗುವ ಜಾನುವಾರುಗಳ ಮಾಹಿತಿ ಪಡೆದು ಹೈನುಗಾರಿಕೆಗೆ ಆಲೋಚನೆ ಮಾಡುತ್ತಿದ್ದಾರೆ.
ಈ ಬಾರಿಯ ಪ್ರದರ್ಶನದಲ್ಲಿ 5 ತಳಿಯ ಆಕಳು, ದನ, 4 ತಳಿಯ ಆಡು, 3 ತಳಿಯ ಕುರಿ, 4 ತಳಿಯ ಮೇಕೆ ಸೇರಿ ಮೀನುಗಳು, ಎಮ್ಮೆ, ಕೋಣ, ಕುದುರೆಗಳು ಸಹ ಇದ್ದವು. ಇನ್ನು ಪ್ರಸಕ್ತ ವರ್ಷದಲ್ಲಿ 2 ತಳಿಯ ಹಂದಿಗಳು ಪ್ರದರ್ಶನದಲ್ಲಿ ಕಂಡಿದ್ದು ವಿಶೇಷವಾಗಿತ್ತು. ಯಾರ್ಕ್ ಶೈರ್ ಹಾಗೂ ಡ್ಯುರಾಕ್ ತಳಿಯ ಹಂದಿಗಳು ಎಲ್ಲರ ಗಮನ ಸೆಳೆದವು.
ಜಾನುವಾರುಗಳ ಪ್ರದರ್ಶನದ ಜತೆಗೆ ಮೇವಿನ ಬೆಳೆ, ಡೇರಿ ಉಪಕರಣ, ಜಾನುವಾರ ಆಹಾರ ಉತ್ಪನ್ನಗಳ ಮಾಹಿತಿ ಜತೆಗೆ ಜಾನುವಾರುಗಳ ಆರೋಗ್ಯದ ಬಗ್ಗೆ ಸಹ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net